ಪ್ರಮುಖ ಸುದ್ದಿ

ಕೊಡಗು ರಿಲೀಫ್ ಸೆಲ್‍ನಿಂದ ಸಂತ್ರಸ್ತರಿಗೆ ನೆರವು

ರಾಜ್ಯ(ಮಡಿಕೇರಿ) ಸೆ.21 :- ಜಮಾಅತೆ ಇಸ್ಲಾಮೀ ಹಿಂದ್‍ನ ಅಂಗ ಸಂಸ್ಥೆಯಾಗಿರುವ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ಮೂಲಕ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಕೊಡಗಿನ 859 ಕುಟುಂಬಗಳನ್ನು ಗುರುತಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗೆ ಇದುವರೆಗೆ ಸುಮಾರು 19ಲಕ್ಷರೂ.ಗಳನ್ನು ವ್ಯಯಿಸಲಾಗಿದೆ ಎಂದು ಕೊಡಗು ರಿಲೀಫ್ ಸೆಲ್‍ನ ಕಾರ್ಯದರ್ಶಿ ಟಿ.ಎ.ಬಶೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸಂಪೂರ್ಣ ಮನೆ ಕಳೆದುಕೊಂಡವರಿಗೆ ನಿರ್ಮಿಸಲಾಗಿರುವ 8 ಮನೆಗಳನ್ನು ಅ.2 ರಂದು ಮಡಿಕೇರಿಯಲ್ಲಿ ಉದ್ಘಾಟಿಸಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಕಳೆದ ಒಂದು ದಶಕದಿಂದೀಚೆಗೆ ರಾಜ್ಯದ 8 ವಲಯಗಳಲ್ಲಿ ಹೆಚ್‍ಆರ್‍ಎಸ್ ಸಮಾಜ ಸೇವಾ ಕೆಲಸ ನಿರ್ವಹಿಸುತ್ತಾ ಬಂದಿದೆ. 40ಕ್ಕೂ ಹೆಚ್ಚು ಗುಂಪುಗಳಲ್ಲಿ 400ಕ್ಕಿಂತಲೂ ಹೆಚ್ಚು ಕಾರ್ಯಕರ್ತರುಗಳನ್ನು ಸಂಘಟನೆ ಹೊಂದಿದೆ. ವೀರಾಜಪೇಟೆ ತಾಲ್ಲೂಕಿನ ನೆರೆಪೀಡಿತ ಸಿದ್ದಾಪುರ, ಕರಡಿಗೋಡು, ಗುಹ್ಯ ಹಾಗೂ ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು, ಕುಂಬಾರಗುಂಡಿ, ಬರಡಿ ಪ್ರದೇಶಗಳಿಗೆ ಕೊಡಗು ರಿಲೀಫ್ ಸೆಲ್ ಕಾರ್ಯಕರ್ತರು ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ. ನೆರೆಯ ಸಂದರ್ಭ ನೆರವಿನ ಕೇಂದ್ರವನ್ನು ತೆರೆದು ಸಂತ್ರಸ್ತರಿಗೆ ಸಹಾಯ ಹಸ್ತವನ್ನು ನೀಡಿತ್ತೆಂದು ತಿಳಿಸಿದ ಅವರು, ಸಿದ್ದಾಪುರದ ಹಿರಾ ಮಸೀದಿಯಲ್ಲಿ ಸೂಪರ್ ಮಾರ್ಕೆಟ್ ಪ್ರಾರಂಭಿಸಿ ಸಂತ್ರಸ್ತರಿಗೆ ಟೋಕನ್ ಮೂಲಕ ದಿನಬಳಕೆಯ ವಸ್ತುಗಳನ್ನು ವಿತರಿಸಲಾಗಿದೆ ಎಂದರು.
ತಾತ್ಕಾಲಿಕ ಶೆಡ್
ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಗೆ ಒಳಗಾಗಿದ್ದ 45 ಕುಟುಂಬಗಳಿಗೆ 4.50 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಲಾಗಿದೆ. ಸುಮಾರು 5 ಲಕ್ಷ ರೂ. ಮೌಲ್ಯದ ಆಹಾರದ ಕಿಟ್‍ಗಳನ್ನು, ಸುಮಾರು 7ಲಕ್ಷ ರೂ. ಮೌಲ್ಯದ ಹಾಸಿಗೆ, ಕಂಬಳಿ, ವಸ್ತ್ರಗಳು, ಪಾದರಕ್ಷೆಗಳು, ಅಡುಗೆ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರವಾಹದಲ್ಲಿ ಕೆಲಸದ ಉಪಕರಣಗಳನ್ನು ಕಳೆದುಕೊಂಡಿದ್ದ ಸಂತ್ರಸ್ತ ಪ್ರಕಾಶ್ ಎಂಬವರಿಗೆ 2500ರೂ. ಮೌಲ್ಯದ ಯಂತ್ರೋಪಕರಣಗಳನ್ನು, ಜೀವನೋಪಾಯಕ್ಕಾಗಿ ಹೊಂದಿದ್ದ ಶರೀಫ್ ಎಂಬವರು ಹೊಂದಿದ್ದ ಅಂಗಡಿಗೆ ಪ್ರವಾಹದಿಂದ ಹಾನಿಯುಂಟಾದ ಹಿನ್ನೆಲೆ ಅವರಿಗೆ 50 ಸಾವಿರ ರೂ. ನೆರವನ್ನು ನೀಡಲಾಗಿದೆ. ಕರಡಿಗೋಡು ಗ್ರಾಮದ ವೃದ್ಧ ಅಂಗವಿಕಲ ಸಂತ್ರಸ್ತರೊಬ್ಬರಿಗೆ 5 ಸಾವಿರ ರೂ. ಮೌಲ್ಯದ ಗಾಲಿ ಖುರ್ಚಿಯನ್ನು ವಿತರಿಸಲಾಗಿದೆ, ಮೂರು ಮಂದಿ ಸಂತಸ್ತರಿಗೆ ಚಿಕಿತ್ಸೆಗಾಗಿ 10 ಸಾವಿರ ರೂ. ನಗದನ್ನು ನೀಡಿರುವುದಾಗಿ ಬಶೀರ್ ತಿಳಿಸಿದರು.
 ಶಿಕ್ಷಣಕ್ಕೆ ನೆರವು  
ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ 45 ಮಂದಿ ವಿದ್ಯಾರ್ಥಿಗಳ ಶಿಕ್ಷಣ, ಪಠ್ಯಪುಸ್ತಕ ಮುಂತಾದವುಗಳಿಗಾಗಿ ಸಂಸ್ಥೆ 68 ಸಾವಿರ ರೂ.ಗಳನ್ನು ವಿನಿಯೋಗಿಸಿದೆ.
ಸುಮಾರು 60 ಮಂದಿಗೆ ವಿದ್ಯಾರ್ಥಿ ವೇತನ, ಆಧಾರ್ ತಿದ್ದುಪಡಿ, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸಿಕೊಡಲು ಶ್ರಮಿಸಲಾಗಿದೆ ಎಂದರು.
 ಉಚಿತ ಆರೋಗ್ಯ ತಪಾಸಣೆ 
ನೆರೆಸಂತ್ರಸ್ತರು ಹಾಗೂ ಸಾರ್ವಜನಿಕರಿಗಾಗಿ ದೇರಳಕಟ್ಟೆಯ ಯೆನಪೋಯ ಮೆಡಿಕಲ್ ಕಾಲೇಜಿನ ಸಹಕಾರದೊಂದಿಗೆ ಸೆ.22ರಂದು ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆಯಲ್ಲಿ ಬೆಳಗ್ಗೆ 9-30ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಶೀರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್‍ನ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರೆಹ್ಮಾನ್ ಪಿ.ಕೆ., ಹೆಚ್‍ಆರೆಸ್ ಸದಸ್ಯರಗಳಾದ ಎನ್.ಎ. ಅಬ್ದುಲ್ ಗಫೂರ್,, ಶಫೀಕ್ ಹಾಗೂ ಕೆ.ಎ.ಇಬ್ರಾಹಿಂ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: