
ದೇಶಪ್ರಮುಖ ಸುದ್ದಿ
ಮದ್ರಾಸ್ ಹೈಕೋರ್ಟ್ ನ ಸಿಜೆಐ ವಿಜಯಾ ಕೆ.ತಹಿಲ್ರಾಮಣಿ ರಾಜೀನಾಮೆ ಸ್ವೀಕರಿಸಿದ ರಾಷ್ಟ್ರಪತಿ ಕೋವಿಂದ್
ನವದೆಹಲಿ,ಸೆ.21–ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಜಯಾ ಕೆ. ತಹಿಲ್ರಾಮಣಿ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಗೀಕರಿಸಿದ್ದಾರೆ.
ವಿಜಯಾ ಕೆ.ತಹಿಲ್ರಾಮಣಿ ಅವರು ತಮ್ಮ ಸ್ಥಾನಕ್ಕೆ ಸೆ. 6 ರಂದು ರಾಜೀನಾಮೆ ನೀಡಿದ್ದರು. ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಸಿದ್ದಾರೆ. ಅದರ ಇನ್ನೊಂದು ಪ್ರತಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೂ ಕಳುಹಿಸಿದ್ದಾರೆ.
ತಹಿಲ್ರಾಮಣಿ ಅವರನ್ನು ಮೇಘಾಲಯ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿತ್ತು. ಕಳೆದ ವರ್ಷ ಆಗಸ್ಟ್ 8ರಂದು ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ತಹಿಲ್ರಾಮಣಿ ಬಡ್ತಿ ಪಡೆದಿದ್ದರು. ಆಗಸ್ಟ್ 28ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ವಿಜಯಾ ಕೆ. ತಹಿಲ್ರಾಮಣಿ ಅವರನ್ನು ಮೇಘಾಲಯ ಹೈಕೋರ್ಟ್ ಗೆ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರನ್ನು ಹಂಗಾಮಿ ನ್ಯಾಯಾಧೀಶರಾಗಿ ನೇಮಕ ಮಾಡಿತ್ತು.
ತಮ್ಮ ವರ್ಗಾವಣೆ ರದ್ದುಪಡಿಸಲು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ತಿರಸ್ಕರಿಸಿದ ಬಳಿಕ ತಹಿಲ್ರಾಮಣಿ ಈ ರಾಜೀನಾಮೆ ನಿರ್ಧಾರ ಕೈಗೊಂಡಿದ್ದರು. ವರ್ಗಾವಣೆಯನ್ನು ವಿರೋಧಿಸಿ ರಾಜೀನಾಮೆ ನೀಡುತ್ತಿರುವುದಾಗಿ ತಹಿಲ್ರಾಮಣಿ ಅವರು ಇತರ ನ್ಯಾಯಮೂರ್ತಿಗಳಿಗೆ ತಿಳಿಸಿದ್ದರು. (ಎಂ.ಎನ್)