ದೇಶ

ಭದ್ರತಾ ವೈಫಲ್ಯ: ಜಾಧವಪುರ ವಿಶ್ವವಿದ್ಯಾಲಯ ಮೇಲೆ ರಾಜ್ಯಪಾಲರ ಕೆಂಗಣ್ಣು

ಕೋಲ್ಕತ್ತಾ,ಸೆ.21-ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ ಕರ್ ಅವರಿಗೆ ಜಾಧವಪುರ ವಿಶ್ವವಿದ್ಯಾಲಯ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿಲ್ಲ ಎಂದು ರಾಜಭವನ ಆಕ್ಷೇಪಿಸಿದೆ.

ಕುಲಪತಿಗಳ ಈ ಗಂಭೀರ ಲೋಪ ಗಮನಕ್ಕೆ ಬಂದಿದೆ. ತಮ್ಮ ಹೊಣೆಯನ್ನು ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಹೇಳಿದೆ. ಅಂತೆಯೇ ಪೊಲೀಸರು ಸೂಕ್ತ ಭದ್ರತೆ ನೀಡಿಲ್ಲ ಎಂಬುದು ರಾಜಭವನದ ಆಕ್ಷೇಪವಾಗಿದೆ.

ಈ ಭದ್ರತಾ ಲೋಪ ರಾಜ್ಯಪಾಲರ ಗಮನ ಸೆಳೆದಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ರಾಜಭವನದ ಪ್ರಕಟಣೆ ಹೇಳಿದೆ. ಘಟನೆಗಳ ಬಗ್ಗೆ 48 ಗಂಟೆಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ರಾಜಭವನ, ವಿಶ್ವವಿದ್ಯಾನಿಲಯ ಆಡಳಿತಕ್ಕೆ ಸೂಚಿಸಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕ ಉದ್ಘಾಟನೆಗೆ ತೆರಳಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಮೇಲೆ ಎಡಪಂಥೀಯ ಸಂಘಟನೆಗಳಿಗೆ ಸೇರಿದ ಕೆಲ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು. ಕೊನೆಗೆ ರಾಜ್ಯಪಾಲ ಜಗದೀಪ್ ಧನಕರ್ ಅವರೇ ಸ್ಥಳಕ್ಕೆ ಧಾವಿಸಿ ಸುಪ್ರಿಯೋರನ್ನು ತಮ್ಮ ಕಾರಿನಲ್ಲಿ ಕರೆದೊಯ್ದರು. ಇದರ ಬೆನ್ನಲ್ಲೇ ಆಕ್ರೋಶಗೊಂಡ ಎಬಿವಿಪಿ ಸದಸ್ಯರು ಕಲಾ ವಿಭಾಗದ ವಿದ್ಯಾರ್ಥಿ ಸಂಘದ ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಗಳಿಗೆ ಬೆಂಕಿ ಹಚ್ಚಿ ನಾಮಫಲಕಕ್ಕೆ ಮಸಿ ಬಳಿದಿದ್ದರು. ಕ್ಯಾಂಪಸ್ಗೆ ತೆರಳದಂತೆ ಮಮತಾ ಬ್ಯಾನರ್ಜಿ, ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಬಾಬುಲ್ ಸುಪ್ರಿಯೊ ಅವರು, ತಮ್ಮ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ಫೋಟೋ ವನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದು, ದಾಳಿ ಕೋರರನ್ನು ಬಂಧಿಸಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸವಾಲೆಸೆದಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಪಶ್ಚಿಮ ಬಂಗಾಲ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಜಾಧವ್ ಪುರ ವಿವಿಯು ದೇಶವಿರೋಧಿಗಳು, ಕಮ್ಯೂನಿಸ್ಟರ ತಾಣವಾಗಿದೆ. ಇದನ್ನು ನಾಶ ಮಾಡಲು ನಮ್ಮ ಸದಸ್ಯರು ಬಾಲಾಕೋಟ್ ಮಾದರಿಯ ಸರ್ಜಿಕಲ್ ದಾಳಿ ನಡೆಸಲಿದ್ದಾರೆ ಎಂದಿದ್ದಾರೆ. (ಎಂ.ಎನ್)

Leave a Reply

comments

Related Articles

error: