ಪ್ರಮುಖ ಸುದ್ದಿ

ಕಾನೂನು ಅರಿವು ಕಾರ್ಯಾಗಾರ : ನೊಂದವರಿಗೆ ನ್ಯಾಯ ಕೊಡಿಸಲು ಶ್ರಮಿಸಿ : ಪೊಲೀಸರಿಗೆ ನ್ಯಾಯಾಧೀಶ ವಿ.ವಿ.ಮಲ್ಲಾಪುರ ಸಲಹೆ

ರಾಜ್ಯ( ಮಡಿಕೇರಿ) ಸೆ.21 :- ಪೊಲೀಸರು ಯಾವುದೇ ರೀತಿಯ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಾಗ ಬಲವಾದ ಸಾಕ್ಷಿ ಸಹಿತ ಸಲ್ಲಿಕೆ ಮಾಡಬೇಕು. ಜೊತೆಗೆ ಸರ್ಕಾರಿ ಅಭಿಯೋಜಕರಿಗೆ ಕಾಲ ಕಾಲಕ್ಕೆ ಮಾಹಿತಿ ಒದಗಿಸಿ ನೊಂದವರಿಗೆ ನ್ಯಾಯ ದೊರಕಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಸಲಹೆ ನೀಡಿದ್ದಾರೆ.
ನಗರದ ಹೊರ ವಲಯದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ಕಾನೂನು ಅರಿವು ಕಾರ್ಯಾಗಾರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತನಿಖಾಧಿಕಾರಿಗಳು ದೋಷ ಆರೋಪ ಪಟ್ಟಿ ಸಲ್ಲಿಸಿ ನಮ್ಮ ಕೆಲಸ ಮುಗಿಯಿತು ಎಂದು ಕೈತೊಳೆದುಕೊಳ್ಳುವುದು ಸರಿಯಲ್ಲ. ಪೊಲೀಸ್ ಠಾಣಾಧಿಕಾರಿಯಾಗಿ ಯಾರೇ ಕರ್ತವ್ಯ ನಿರ್ವಹಿಸಿದರೂ ಸಹ, ಸಹೊದ್ಯೋಗಿ ಸಿಬ್ಬಂಧಿ ಜತೆ ಚರ್ಚಿಸಿ ಸರ್ಕಾರಿ ಅಭಿಯೋಜಕರಿಗೆ ಸಂಬಂಧಪಟ್ಟ ಪ್ರಕರಣ ಬಗ್ಗೆ ಸಾಕ್ಷಿ ಒದಗಿಸಿ ನ್ಯಾಯ ಕೊಡಿಸಲು ಪ್ರಯತ್ನಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ತಿಳಿಸಿದರು.
ಸಿವಿಲ್, ಕ್ರಿಮಿನಲ್ ಹೀಗೆ ಯಾವುದೇ ರೀತಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಭಿನ್ನ ಭಿನ್ನ ತೀರ್ಪುಗಳು ಬರುತ್ತವೆ. ಇದಕ್ಕೆ ನ್ಯಾಯಾಲಯ, ಪೊಲೀಸರು, ಅಭಿಯೋಜಕರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ವಿ.ವಿ.ಮಲ್ಲಾಪುರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ತನಿಖಾಧಿಕಾರಿ ತನಿಖೆ ಮಾಡುವ ಸಂದರ್ಭ ಹಾಗೂ ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ನಿಯೋಜಿಸಿರುವ ಪೊಲೀಸರು ಕಡ್ಡಾಯವಾಗಿ ಹಾಜರಾಗಬೇಕು. ನ್ಯಾಯಾಲಯದಲ್ಲಿ ಸಂಬಂಧಪಟ್ಟ ಪ್ರಕರಣವನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಸಂಬಂಧಪಟ್ಟ ಪೊಲೀಸರೇ ಇರುವುದಿಲ್ಲ. ಹೀಗಾದರೆ ಹೇಗೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಸರಿಯಾಗಿ ತನಿಖೆ ಮಾಡಿ ಅಭಿಯೋಜಕರಿಗೆ ವರದಿ ಸಲ್ಲಿಸಿದಾಗ ಅಭಿಯೋಜಕರು ವಾದ ಮಂಡಿಸಲು ಸಹಕಾರಿಯಾಗುತ್ತದೆ. ಇದರಿಂದ ನೊಂದವರಿಗೆ ನ್ಯಾಯ ದೊರಕಿಸಲು ಸಾಧ್ಯ. ಆದ್ದರಿಂದ ತನಿಖಾಧಿಕಾರಿಗಳು ಹೆಚ್ಚಿನ ಅಧ್ಯಯನ ಮಾಡಿ, ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೊಡಗು ಜಿಲ್ಲಾ ಪೊಲೀಸ್ ನೂತನ ‘ಫೇಸ್‍ಬುಕ್’ ಪೇಜ್ ಅನ್ನು ಉದ್ಘಾಟಿಸಿ ಮಾತನಾಡಿ ಆಡಳಿತಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾದಾಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಚರ್ಚಿಸಿ ಕೆಲವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆ ದಿಸೆಯಲ್ಲಿ ದಿನದ 24 ಗಂಟೆಯೂ ಸಹ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ಹೇಳಿದರು.
ಭಾರತೀಯ ನಾಗರಿಕ ಸೇವಾ(ಐಎಎಸ್) ಅಧಿಕಾರಿಗಳಿಗೆ 5 ಹಂತದಲ್ಲಿ ತರಬೇತಿ ನೀಡಲಾಗುತ್ತದೆ. ಅದೇ ರೀತಿ ತಳಮಟ್ಟದ ಅಧಿಕಾರಿಗಳಿಗೂ ಸಹ ತರಬೇತಿ ಅಗತ್ಯ. ಜಿಲ್ಲಾ, ತಾಲ್ಲೂಕು ಮಟ್ಟದ ದಂಡಾಧಿಕಾರಿಗಳು ಸಮಸ್ಯೆಗಳು ಎದುರಾದಾಗ ಕೆಲವು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಿರ್ಧಾರ ತೆಗೆದುಕೊಳ್ಳಲು ಕಾನೂನು, ಕಾಯ್ದೆಗಳ ಬಗ್ಗೆ ಹೆಚ್ಚಿನ ಜ್ಞಾನಾರ್ಜನೆ ಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಭೂಮಿ ವ್ಯಾಜ್ಯಗಳು ಹೆಚ್ಚಾಗಿ ದಾಖಲಾಗುತ್ತವೆ. ಇವುಗಳನ್ನು ಶೀಘ್ರ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕಂದಾಯ, ಪೊಲೀಸ್, ಪಂಚಾಯತ್ ರಾಜ್ ಇಲಾಖೆಗಳಿಗೆ ಒಂದು ದಿನದ ತರಬೇತಿ ಹಮ್ಮಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಕಾನೂನು ಅರಿವು ಕುರಿತು ಎರಡು ದಿನಗಳ ಕಾಲ ಪೊಲೀಸ್, ಕಂದಾಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪೊಲೀಸರು ತನಿಖೆಯನ್ನು ಹೇಗೆ ನಿರ್ವಹಿಸಬೇಕು. ಗೂಂಡಾ ಕಾಯ್ದೆ ಇತರೆ ಪ್ರಕರಣಗಳನ್ನು ಹೇಗೆ ನಿರ್ವಹಣೆ ಮಾಡಬೇಕು. ಯಾವ ರೀತಿ ಪ್ರಕರಣ ದಾಖಲಿಸಬೇಕು. ಮತ್ತಿತರ ಬಗ್ಗೆ ಅಪ್‍ಡೇಟ್ ಮಾಹಿತಿ ತಿಳಿದುಕೊಳ್ಳುವಂತಾಗಲು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಸರ್ಕಾರಿ ಅಭಿಯೋಜಕರಾದ ನಾರಾಯಣ ಅವರು ಪೊಲೀಸ್ ಇಲಾಖೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಯಾವುದೇ ಪ್ರಕರಣಗಳನ್ನು ಹೆಚ್ಚಿನ ಆಸಕ್ತಿ ಮತ್ತು ಶ್ರಮವಹಿಸಿ ಸಾಕ್ಷಿಗಳನ್ನು ಸಂಗ್ರಹಿಸಿ ಅಭಿಯೋಜಕರಿಗೆ ಒದಗಿಸಿದಾಗ ಪರಿಣಾಮಕಾರಿಯಾಗಿ ವಾದ ಮಂಡಿಸಲು ಸಹಕಾರಿಯಾಗುತ್ತದೆ. ನೊಂದವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತದೆ ಎಂದರು.
ಪೋಕ್ಸೋ ಸೇರಿದಂತೆ ಹಲವು ಪ್ರಕರಣಗಳಿಗೆ ವೈದ್ಯಕೀಯ ವರದಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವೈದ್ಯಾಧಿಕಾರಿಗಳು ನಿಖರ ಮಾಹಿತಿ ಒದಗಿಸುವಂತಾಗಬೇಕು. ತನಿಖಾಧಿಕಾರಿಗಳು ಹೊಸ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ತನಿಖೆ ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಆಡಿಯೋ ಮತ್ತು ವೀಡಿಯೋ ದಾಖಲೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸರ್ಕಾರಿ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ನ್ಯಾಯ ದೊರಕಿಸಿರುವ ಸರ್ಕಾರಿ ಅಭಿಯೋಜಕರಾದ ನಾರಾಯಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಿಐಡಿ ವಿಭಾಗದ ಕಾನೂನು ಸಲಹೆಗಾರರಾದ ಮಹೇಶ್ ವೈದ್ಯ ಅವರು ಮಾತನಾಡಿ ಆಡಳಿತ ನಿರ್ವಹಣೆ, ಸಾರ್ವಜನಿಕರ ಆಸ್ತಿ ಪಾಸ್ತಿ ರಕ್ಷಣೆ ಸಂದರ್ಭದಲ್ಲಿ ಪೊಲೀಸರು ನಿರ್ವಹಿಸಬೇಕಾದ ಪಾತ್ರ ಮತ್ತಿತರ ಕಾನೂನು ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ವಿರಾಜಪೇಟೆ ಉಪ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಸ್ವಾಗತಿಸಿದರು. ಸುಕನ್ಯಾ ಪ್ರಾರ್ಥಿಸಿದರು. ಪೊಲೀಸ್ ಅಧಿಕಾರಿ ಚೇತನ್ ನಿರೂಪಿಸಿದರು. ಸೋಮವಾರಪೇಟೆ ಉಪ ಪೊಲೀಸ್ ವರಿಷ್ಠಾಧಿಕಾರಿ ಮುರಳೀಧರ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: