ಪ್ರಮುಖ ಸುದ್ದಿ

ದಸರಾ ಕ್ರೀಡಾಕೂಟಕ್ಕೆ ಚಾಲನೆ : ಪ್ರಾಕೃತಿಕ ವಿಕೋಪದ ನಡುವೆಯೂ ಮೈಕೊಡವಿ ನಿಂತ ಕೊಡಗು : ನ್ಯಾಯಾಧೀಶೆ ನೂರುನ್ನೀಸ ಮೆಚ್ಚುಗೆ

ರಾಜ್ಯ( ಮಡಿಕೇರಿ) ಸೆ.23 :-ಸತತ ಎರಡು ವರ್ಷಗಳ ಅವಧಿಯ ಪ್ರಾಕೃತಿಕ ವಿಕೋಪಗಳ ನಡುವೆಯೂ ಕೊಡಗು ಮೈಕೊಡವಿ ಎದ್ದು ನಿಲ್ಲುತ್ತಿದೆ. ಇಲ್ಲಿನ ಜನತೆ ತಮ್ಮೆಲ್ಲ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಿ ಮುನ್ನಡೆಯುವ ಛಲಗಾರಿಕೆಯನ್ನು ತೋರಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
ಮಡಿಕೇರಿ ದಸರಾ ಸಮಿತಿಯ ಕ್ರೀಡಾ ಸಮಿತಿಯ ವತಿಯಿಂದ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ‘ದಸರಾ ಕ್ರೀಡಾಕೂಟ’ಕ್ಕೆ ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಕೃತಿಕ ವಿಕೋಪದಿಂದ ಎದುರಾದ ಎಲ್ಲ ಸವಾಲುಗಳನ್ನು ಎದುರಿಸಿ, ಬದುಕು ಕಟ್ಟಿಕೊಳ್ಳುವ ಎದೆಗಾರಿಕೆ ತೋರುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ದಸರಾ ಕ್ರೀಡಾಕೂಟದಂತಹ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆ ಭಾರತೀಯ ಸೈನ್ಯಕ್ಕೆ ಅತ್ಯಪೂರ್ವ ಕಾಣಿಕೆಯನ್ನು ನೀಡಿರುವಂತೆಯೇ ಕ್ರೀಡಾ ಕ್ಷೇತ್ರಕ್ಕೂ ಅಮೂಲ್ಯ ಕೊಡುಗೆಯನ್ನು ನೀಡಿದೆ. ಇಂತಹ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಇಲ್ಲಿನ ಜನತೆ ಧೃತಿಗೆಡದೆ ಎದುರಿಸಿದ್ದಾರೆ, ಇತರೆ ಪ್ರದೇಶಗಳಲ್ಲಿ ಇಂತಹ ವಿಕೋಪಗಳು ಸಂಭವಿಸಿದ್ದರೆ ಆ ಪ್ರದೇಶವನ್ನೆ ತೊರೆದು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರಿಲ್ಲಿ ಅಪಾರ ಕಷ್ಟ ನಷ್ಟಗಳ ನಡುವೆಯೂ ಏನೂ ಆಗಿಲ್ಲವೇನೋ ಎನ್ನುವಂತೆ ಜನತೆ ತಮ್ಮೆಲ್ಲ ದುಃಖಗಳನ್ನು ಮರೆತು ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ದಸರಾ ಉತ್ಸವವೆಂದರೆ ವಿಶ್ವ ಪ್ರಸಿದ್ಧ ಮೈಸೂರು ದಸರಾ ನಮ್ಮ ಕಣ್ಣ ಮುಂದೆ ಬರುತ್ತದೆ. ಆ ದಸರಾವನ್ನು ಬಿಟ್ಟರೆ ಮಡಿಕೇರಿ ದಸರಾ ರಾಜ್ಯದಲ್ಲೆ ದ್ವಿತೀಯ ಸ್ಥಾನದಲ್ಲಿ ನಿಲುತ್ತದೆಂದು ಸಂತಸ ವ್ಯಕ್ತಪಡಿಸಿದ ನೂರುನ್ನೀಸ ಅವರು, ದಸರಾ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿತ ಕ್ರೀಡಾ ಕೂಟದಲ್ಲಿ ಮಕ್ಕಳು ಹೆಚ್ಚಾಗಿ ಪಾಲ್ಗೊಳ್ಳುವಂತೆ ಕರೆ ನೀಡಿ, ಕ್ರೀಡಾಕೂಟದ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳು ಮೂಡಿಬರಲಿ. ಶಕ್ತಿ ದೇವತೆಗಳ ಕೃಪೆ ಈ ಜಿಲ್ಲೆಯ ಜನತೆಯ ಮೇಲಿರಲಿ ಎಂದು ಆಶಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕ್ರೀಡಾ ಕೂಟದ ಆಟೋಟಗಳಿಗೆ ಚಾಲನೆ ನೀಡಿ ಮಾತನಾಡಿ, ಇಂತಹ ಕ್ರೀಡಾಕೂಟಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು. ಕ್ರೀಡೆಯಲ್ಲಿ ಬಹುಮಾನಗಳನ್ನು ಪಡೆಯುವುದಕ್ಕೂ ಮಿಗಿಲಾಗಿ ಪಾಲ್ಗೊಳ್ಳುವುದು ಮತ್ತು ಕ್ರೀಡೆಯಿಂದ ಸ್ಫ್ಫೂರ್ತಿಯನ್ನು, ಆತ್ಮವಿಶ್ವಾಸವನ್ನು ಪಡೆಯುವುದು ಮುಖ್ಯವೆಂದು ಅಭಿಪ್ರಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಡಿಕೇರಿ ದಸರಾ ಕವಿ ಗೋಷ್ಠಿ ಸಮಿತಿ ಅಧ್ಯಕ್ಷರಾದ ಚಿ.ನಾ. ಸೋಮೇಶ್, ಶಕ್ತಿ ದೇವತೆಗಳ ಆರಾಧನೆಯ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ಕಳೆದ ಹಲವಾರು ವರ್ಷಗಳಿಂದ ಕ್ರೀಡಾಕೂಟ, ಕವಿ ಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮಗಳು ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.ಇಂತಹ ಕ್ರೀಡಾಕೂಟದ ಮೂಲಕ ಕ್ರೀಡಾ ಮನೋಭಾವನೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುವಂತಾಗಬೇಕೆಂದು ಆಶಿಸಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ರಾಬಿನ್ ದೇವಯ್ಯ ಮಾತನಾಡಿ, ಎಳೆಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ದಸರಾ ಕ್ರೀಡಾ ಕೂಟ ಅತ್ಯಂತ ಉಪಯುಕ್ತವಾದುದೆಂದು ಅಭಿಪ್ರಾಯಿಸಿ ಶುಭ ಹಾರೈಸಿದರು.
ಕ್ರೀಡಾ ಜ್ಯೋತಿಯ ಆಗಮನ- ನಗರದ ಶ್ರೀ ರಾಜರಾಜೇಶ್ವರಿ ಶಾಲಾ ಮಕ್ಕಳು ಶ್ರೀ ಚೌಡೇಶ್ವರಿ ದೇಗುಲದಿಂದ ಓಟದ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ತಂದ ಜ್ಯೋತಿಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ಅವರು ಸ್ವೀಕರಿಸಿ, ಕ್ರೀಡಾಜ್ಯೋತಿಯನ್ನು ಬೆಳಗಿದರು.
ಕಾರ್ಯಕ್ರಮದಲ್ಲಿ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಎಂ. ಹರೀಶ್, ನಗರಸಭಾ ಆಯುಕ್ತರಾದ ರಮೇಶ್, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಖಜಾಂಚಿ ಉಮೇಶ್ ಸುಬ್ರಮಣಿ, ಕ್ರೀಡಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಡಿ. ಕಪಿಲ್, ಸಹ ಕಾರ್ಯದರ್ಶಿ ಮುನೀರ್ ಮಾಚಾರ್, ಉಪಾಧ್ಯಕ್ಷ ರಾಜೇಶ್ ಕುಯ್ಯಮುಡಿ ಮೊದಲಾದವರು ಪಾಲ್ಗೊಂಡಿದ್ದರು. ತೆನ್ನೀರ ಮೈನ ಕಾರ್ಯಕ್ರಮ ನಿರೂಪಿಸಿ, ಪ್ರಭು ರೈ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: