ದೇಶಪ್ರಮುಖ ಸುದ್ದಿ

ಪಿ.ಚಿದಂಬರಂ ಅವರನ್ನು ಭೇಟಿಯಾದ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ

ನವದೆಹಲಿ,ಸೆ.23- ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾದರು.

ಚಿದಂಬರಂ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಪುತ್ರ ಕಾರ್ತಿ ಚಿದಂಬರಂ ಕೂಡ ಇಂದು ತಂದೆಯನ್ನು ಭೇಟಿ ಮಾಡಿದರು.

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇದೇ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸೋನಿಯಾ ಹಾಗೂ ಮನಮೋಹನ ಸಿಂಗ್ ಅವರು ಭೇಟಿಯಾಗಿಲ್ಲ. ಜೈಲಿನಲ್ಲಿ ಒಬ್ಬರನ್ನು ಭೇಟಿಯಾಗಲು ಮಾತ್ರ ಅವಕಾಶ ಇದೆ. ಈ ಕಾರಣದಿಂದಾಗಿ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿದ್ದಾರೆ. ಡಿಕೆಶಿ ಅವರನ್ನು ಭೇಟಿಯಾಗಲು ಜೈಲು ಅಧಿಕಾರಿಗಳು ಅವಕಾಶ ನೀಡಲಿಲ್ಲ.

ಐಎನ್‌ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಚಿದಂಬರಂ ಅವರನ್ನು ಆಗಸ್ಟ್ 21 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿತ್ತು. ಪಿ.ಚಿದಂಬರಂ ಅವರ ವಕೀಲರು ದಿಲ್ಲಿ ಹೈಕೋರ್ಟ್‌ಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ, ಸಿಬಿಐ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ಜಾಮೀನು ನೀಡುವುದನ್ನು ವಿರೋಧಿಸಿದೆ. ಈ ವಿಚಾರ ಇಂದು ವಿಚಾರಣೆಗೆ ಬರಲಿದೆ. ಐಎನ್‌ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಚಿದಂಬರಂ ಅವರನ್ನು ಸಿಬಿಐ ಮತ್ತು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: