
ಮೈಸೂರು
ಅಲೆಮಾರಿ ಜನರಿಗೆ ನೆಲಮನೆ ನಿರ್ಮಿಸಿಕೊಟ್ಟು ಭೂಗಳ್ಳರಿಂದ ಗೋಮಾಳ ರಕ್ಷಿಸಲು ಒತ್ತಾಯಿಸಿ ಪ್ರತಿಭಟನೆ
ಮೈಸೂರು,ಸೆ.23:- ಅಲೆಮಾರಿ ಜನರಿಗೆ ನೆಲಮನೆ ನಿರ್ಮಿಸಿಕೊಟ್ಟು ಭೂಗಳ್ಳರಿಂದ ಸರ್ಕಾರಿ ಕೆರೆ, ಕುಂಟೆ, ರಾಜಕಾಲುವೆ, ಗೋಮಾಳ ರಕ್ಷಿಸಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರಿನ ಸುತ್ತಮುತ್ತಲ ಭೂಮಿಗೆ ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ ಬಂದಿರುವುದರಿಂದ ಭೂಗಳ್ಳರು ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳ ಸಹಕಾರದಿಂದ ಸರ್ಕಾರಿ ಕೆರೆಕುಂಟೆ ರಾಜ ಕಾಲುವೆ ಗೋಮಾಳ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ಖಾಸಗಿ ಬಡಾವಣೆಗಳನ್ನು ನಿರ್ಮಿಸಿಕೊಳ್ಳುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ.ನಷ್ಟ ಉಂಟಾಗಿದೆ ಎಂದು ಹಿಂದೆ ಜಿಲ್ಲಾಧಿಕಾರಿಯಾಗಿದ್ದವರು ವರದಿ ಸಲ್ಲಿಸಿದ್ದರು. ಖಾಸಗಿ ಬಡಾವಣೆಗಳ ಪಾಲಾಗುತ್ತಿರುವ ಕೆರೆ,ಕುಂಟೆ, ಬಾವಿ, ರಾಜ ಕಾಲುವೆಗಳು ಮುಚ್ಚಿಹೋಗಿ, ಅಂತರ್ಜಲ ಬತ್ತಿಹೋಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಬರುವ ಸೂಚನೆಯಿದೆ. ಸರ್ಕಾರಿ ಗೋಮಾಳ ಭೂಗಳ್ಳರ ವಶವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಕಛೇರಿಗಳು, ಆಸ್ಪತ್ರೆ, ಶಾಲಾ-ಕಾಲೇಜು, ಸ್ಮಶಾನ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಜಾಗ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಂಡು ಮೈಸೂರಿನ ಸುತ್ತ,ಮುತ್ತಲಿರುವ ಸರ್ಕಾರಿ ಕೆರೆ, ಕುಂಟೆ, ಬಾವಿ ರಾಜಕಾಲುವೆ, ಗೋಮಾಳವನ್ನು ಭೂಗಳ್ಳರಿಂದ ರಕ್ಷಿಸಿ ಶ್ಯಾದನಹಳ್ಳಿ ಸರ್ಕಾರಿ ಗೋಮಾಳದಲ್ಲಿ ಏಕಲವ್ಯ ನಗರದ ಅಲೆಮಾರಿ ಜನರಿಗೆ ನೆಲ, ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಬಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಶಾಖೆಯ ಕಾರ್ಯಕರ್ತರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)