ಪ್ರಮುಖ ಸುದ್ದಿಮೈಸೂರು

ಪ್ರವಾಸಿಗರನ್ನು ಸೆಳೆಯಲು ‘ಮೈ ಸಿಟಿ ಮೈ ಕ್ಯಾನ್ವಾಸ್’ ಪರಿಕಲ್ಪನೆ ದಸರಾದಲ್ಲೂ ಅಳವಡಿಕೆ : ಸಚಿವ ಸಿಟಿ ರವಿ ಮಾಹಿತಿ

ಬೆಂಗಳೂರು/ಮೈಸೂರು,ಸೆ.24:-  ಕುಂಭಮೇಳ ಪ್ರಯುಕ್ತ ಉತ್ತರಪ್ರದೇಶದಲ್ಲಿ ಕೈಗೊಂಡ ‘ಮೈ ಸಿಟಿ ಮೈ ಕ್ಯಾನ್ವಾಸ್’ ಪರಿಕಲ್ಪನೆಯನ್ನು ಮೈಸೂರು ದಸರಾದಲ್ಲೂ ಅಳವಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಈ ಕುರಿತು ನಿನ್ನೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ    ಮಾತನಾಡಿದ ಸಚಿವರು  ಉತ್ತರಪ್ರದೇಶದಲ್ಲಿ ನಗರದ ಗೋಡೆ ಸೇರಿ ಇನ್ನಿತರ ಕಡೆಗಳಲ್ಲಿ ಕುಂಭಮೇಳಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಲಾಗಿತ್ತು. ಆ ಪರಿಕಲ್ಪನೆಯಂತೆ ಮೈಸೂರು ನಗರದಲ್ಲೂ ದಸರಾ ಇತಿಹಾಸ, ಸಂಪ್ರದಾಯ ಬಿಂಬಿಸುವ ಚಿತ್ರ ಬಿಡಿಸಲಾಗುತ್ತದೆ. ಗಾಳಿಪಟ ಸ್ಪರ್ಧೆ, ರಸಪ್ರಶ್ನೆ, 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್, ಹಸಿರು ಸಂತೆ, ಲೇಸರ್ ಪ್ರದರ್ಶನ, ಸ್ತಬ್ಧಚಿತ್ರ ಪ್ರದರ್ಶನ ಸೇರಿ ಇತರೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.  ದಸರಾ ವೇಳೆ ಮೈಸೂರು, ರಾಮನಗರ, ಮಂಡ್ಯ ಮತ್ತು ಚಾಮರಾಜನಗರಕ್ಕೆ ಬರುವ ಹೊರರಾಜ್ಯದ ಪ್ರವಾಸಿಗರಿಗೆ ವಾಹನ ಪ್ರವೇಶ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸೆ.27 ಪ್ರವಾಸಿ ದಿನವಾಗಿದ್ದು  ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಪ್ರವಾಸಿ ದಿನ ಆಚರಿಸಲು ತಲಾ 30 ಸಾವಿರ ರೂ. ನೀಡಲಾಗುವುದು.  ಅಂದು ಬೆಂಗಳೂರಿನ ಬಸವನಗುಡಿಯಿಂದ ಮೈಸೂರು ಅರಮನೆವರೆಗೆ ಸೈಕಲ್ ಜಾಥಾ ನಡೆಯಲಿದೆ. ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ, ಅಂಚೆ ಕವರ್ ಬಿಡುಗಡೆ ಮಾಡಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಹೂಡಿಕೆಗೆ ಆಹ್ವಾನಿಸಲು ಚಿಂತನೆ ನಡೆಸಲಾಗಿದೆ. ಯಾವೆಲ್ಲ ಪ್ರವಾಸಿ ತಾಣಗಳಲ್ಲಿ ಹೋಟೆಲ್​ಗಳ ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆ ಸರ್ವೆ ನಡೆಸಲಾಗುತ್ತಿದೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: