ಪ್ರಮುಖ ಸುದ್ದಿ

‘ಆಂಜಮುತ್ತ್’ ಕೊಡವ ಕೃತಿ ಲೋಕಾರ್ಪಣೆ : ಕೊಡಗಿನ ನೈಜ ಪರಂಪರೆಯನ್ನು ಪರಿಚಯಿಸಿ : ಯುವ ಸಾಹಿತಿಗಳಿಗೆ ಕೆ.ಎಸ್.ದೇವಯ್ಯ ಕಿವಿಮಾತು

ರಾಜ್ಯ( ಮಡಿಕೇರಿ) ಸೆ.25 : – ವಿಶಿಷ್ಟ ನೆಲೆಗಟ್ಟಿನ ಕೊಡಗಿನ ನೈಜ ಪರಂಪರೆಯನ್ನು ಸಾಹಿತ್ಯದ ಮೂಲಕ ಪರಿಚಯಿಸುವ ಕಾರ್ಯವನ್ನು ಇಂದಿನ ಯುವ ಸಾಹಿತಿಗಳು ಮಾಡಬೇಕು ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಕಿವಿಮಾತು ಹೇಳಿದ್ದಾರೆ.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಗ್ರಾಮೋತ್ಥಾನ ಭಾರತ ಪ್ರಕಾಶನ ಹೊರ ತಂದಿರುವ ಪತ್ರಕರ್ತ ಚಿ.ನಾ.ಸೋಮೇಶ್ ಅವರು ಬರೆದಿರುವ ‘ಆಂಜಮುತ್ತ್’ ಕೊಡವ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ನೈಜ ಪರಂಪರೆಯನ್ನು ಬರೆಯುವಲ್ಲಿ ಇಂದಿನ ಯುವ ಸಾಹಿತಿಗಳು ವಿಫಲರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟ ದೇವಯ್ಯ, ಒಬ್ಬೊಬ್ಬರು ಒಂದೊಂದು ರೀತಿಯ ಚಿತ್ರಣವನ್ನು ತಮ್ಮ ಸಾಹಿತ್ಯದ ಮೂಲಕ ಪರಿಚಯಿಸುತ್ತಿರುವುದರಿಂದ ಕೊಡಗನ್ನು ತಪ್ಪು ತಪ್ಪಾಗಿ ಅರ್ಥೈಸಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು.
ಕೊಡಗಿನ ಕುರಿತು ಬರೆಯುವವರು ಅವರವರಿಗೆ ತೋಚಿದಂತೆ ಬರೆಯುತ್ತಿದ್ದಾರೆ. ಇದರಿಂದ ಕೊಡಗಿನ ಪರಂಪರೆಗೆ ಒಂದೊಂದು ಅರ್ಥ ನೀಡಿದಂತಾಗಿದೆ ಎಂದ ಅವರು, ಕೊಡಗಿನವರು ಒಗ್ಗೂಡಿ ಬದುಕಿದಾಗ ಮಾತ್ರ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವೆಂದರು.  ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗಿನ ಪತ್ರಕರ್ತರು ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ಭಾಷಾ ಬೆಳವಣಿಗೆಗೆ ಸಹಕಾರಿಯಾಗಿರುವುದು ಸ್ವಾಗತಾರ್ಹವೆಂದರು. ಇಂದಿನ ಯುವ ಪತ್ರಕರ್ತರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧೆ ಮತ್ತು ಆಸಕ್ತಿಯನ್ನು ತೋರುವುದರೊಂದಿಗೆ ಕಾರ್ಯ ಕ್ಷಮತೆಯನ್ನು ಮೆರೆಯುತ್ತಿದ್ದಾರೆ. ಪತ್ರಿಕಾರಂಗ ಮಾತ್ರವಲ್ಲದೆ ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆ ಮತ್ತು ಸಾಮಾಜಿಕ ಕಳಕಳಿಯನ್ನು ಕೂಡ ಹೊಂದಿರುವುದು ಉತ್ತಮ ಬೆಳವಣಿಗೆ ಎಂದರು.
ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ವಾತಾವರಣ ಕೊಡಗು ಜಿಲ್ಲೆಯಲ್ಲಿದ್ದು, ಯುವ ಸಾಹಿತಿಗಳ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಚಿದ್ವಿಲಾಸ್ ಶುಭ ಹಾರೈಸಿದರು.
ಕೃತಿ ರಚನೆಕಾರ ಚಿ.ನಾ.ಸೋಮೇಶ್ ಮಾತನಾಡಿ ಪುಸ್ತಕ ರಚನೆಯ ತಮ್ಮ ಅನುಭವವನ್ನು ಹಂಚಿಕೊಂಡರು.
ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ “ಆಂಜಮುತ್ತ್” ಕೃತಿಯ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.
ಪ್ರೆಸ್‍ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ ಹಾಗೂ ಉಪಾಧ್ಯಕ್ಷ ಆದಿತ್ಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: