ಮೈಸೂರು

ಅಪೌಷ್ಠಿಕತೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ : ಡಾ.ಜೆ.ರಾಜೇಶ್ವರಿ

ಮೈಸೂರು,ಸೆ.24:- ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಾಗೂ ಪೋಷನ್ ಅಭಿಯಾನ ಜನಾಂದೋಲನ ಅಂಗವಾಗಿ ‘ಆಹಾರ ಮತ್ತು ಪೌಷ್ಠಿಕತೆ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು  ಫುಡ್ ಸೈನ್ಸ್ ಅಂಡ್ ನ್ಯೂಟ್ರೀಷನ್ ವಿಭಾಗದ  ಸಹ ಪ್ರಾಧ್ಯಾಪಕರಾದ ಡಾ.ಜೆ.ರಾಜೇಶ್ವರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತ ದೇಶದಲ್ಲಿ ಅಪೌಷ್ಠಿಕತೆ ಎದ್ದು ಕಾಣುತ್ತಿದೆ. ಈ ಅಪೌಷ್ಠಿಕತೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ, ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಅಪೌಷ್ಠಿಕತೆ ಕಂಡು ಬರುತ್ತಿದೆ. ಮಕ್ಕಳು ಬೆಳವಣಿಗೆಗೆ ಬೇಕಾದ ಪೋಷಕಾಂಶ ಹೊಂದಿರುವ ಉತ್ತಮ ಆಹಾರವನ್ನು ಸೇವಿಸಬೇಕು. ಸಂಶೋಧನೆಯ ಪ್ರಕಾರ ಈಗ ಜನಿಸುತ್ತಿರುವ ಮಕ್ಕಳಲ್ಲೂ ಕೂಡ ಅಪೌಷ್ಠಿಕತೆ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಾಗಿ ಇಂದಿನ ಯುವಪೀಳಿಗೆ ತಮ್ಮ ತಮ್ಮ ಮನೆಗಳಲ್ಲಿ ಅಪೌಷ್ಠಿಕತೆಯಿಂದ ಉಂಟಾಗುವ ಅನಾನುಕೂಲಗಳ ಬಗ್ಗೆ ತಿಳಿಸಿ ಉತ್ತಮ ಆಹಾರವನ್ನು ಉಪಯೋಗಿಸುವಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ.ಮಹದೇವಯ್ಯ ಮಾತನಾಡಿ ಅಪೌಷ್ಠಿಕತೆಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನ್ನಭಾಗ್ಯ ಯೋಜನೆ, ಮದ್ಯಾಹ್ನದ ಬಿಸಿ ಊಟದ ಯೋಜನೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರದ ಸರಬರಾಜು ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಅಪೌಷ್ಠಿಕತೆ ಕೊರತೆಯಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಭಾರತದಲ್ಲಿ ಸರ್ವೇ ಸಾಮಾನ್ಯ ಆದುದರಿಂದ ಎಲ್ಲರೂ ಗುಣಮಟ್ಟದ ಆಹಾರವನ್ನು ಸೇವಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಮಂಜುಳಾ.ಎಸ್, ಉಪನ್ಯಾಸಕರು, ಭೂಗೋಳಶಾಸ್ತ್ರ ವಿಭಾಗ, ಸ್ವಾಗತ ಡಾ.ಟಿ.ರಮೇಶ್, ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ, ವಂದನಾರ್ಪಣೆ ಕೆ.ಎಸ್.ಯಶುಪಾಲ್, ಮುಖ್ಯಸ್ಥರು, ಇಂಗ್ಲೀಷ್ ವಿಭಾಗ ಇವರು ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅಧ್ಯಾಪಕರು, ಅಧ್ಯಾಪಕೇತರು ಮತ್ತು ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. (ಎಸ್.ಎಚ್)

Leave a Reply

comments

Related Articles

error: