ಕರ್ನಾಟಕಪ್ರಮುಖ ಸುದ್ದಿ

ಕಾಶ್ಮೀರ ಎಂದೆಂದಿಗೂ ನಮ್ಮದೆ – ಬೆಂಗಳೂರಿನಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬೆಂಗಳೂರು (ಸೆ.25): ಕಾಶ್ಮೀರ ಎಂದೆಂದಿಗೂ ನಮ್ಮದೆ. ಬೇರೆ ದೇಶಗಳ ಆಂತರಿಕ ವಿಷಯದಲ್ಲಿ ಭಾರತ ಯಾವತ್ತೂ ತಲೆ ಹಾಕುವುದಿಲ್ಲ ಅದೇ ರೀತಿ ನಮ್ಮ ದೇಶದ ಆಂತರಿಕ ವಿಷಯದಲ್ಲೂ ಬೇರೆಯವರು ತಲೆ ಹಾಕುವುದನ್ನು ಸಹಿಸುವುದಿಲ್ಲ ಎಂದು ಗೌರವಾನ್ವಿತ ಉಪರಾಷ್ಟ್ರಪತಿಗಳಾದ ವೆಂಕಯ್ಯ ನಾಯ್ಡು ಅವರು ಹೇಳಿದರು.

ಅವರು ಮಂಗಳವಾರ, ಬೆಂಗಳೂರಿನ ಜಯನಗರದ ಬಿಹೆಚ್‍ಎಸ್ ಹೈಯರ್ ಎಜುಕೇಷನ್ ಸೊಸೈಟಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಹೆಚ್‍ಎಸ್ ಸಂಸ್ಥೆ ಉತ್ತಮ ವಿದ್ಯಾಭ್ಯಾಸ ನೀಡುತ್ತಾ ಬಂದಿದೆ. ಇಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ಬಹಳ ಸಂತೋಷವಾಗಿದೆ ಎಂದರು.

ಮುಂದುವರಿದು ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ. ಯುವಕರು ಈ ಬಗ್ಗೆ ಚಿಂತಿಸಬೇಕಿದೆ. ಭಾರತ ದೇಶ ಅನೇಕ ಮಹನೀಯರನ್ನು ಹೊಂದಿದ ದೇಶ. ಸಂಗ್ವಳ್ಳಿ ರಾಯಣ್ಣ ಕಿತ್ತೂರು ಚೆನ್ನಮ್ಮ, ಬಸವಣ್ಣ, ನಾರಾಯಣ ಗುರು, ಚಿದಂಬರಂ ಪಿಳ್ಳೈ, ಹೀಗೆ ಅನೇಕ ಮಹನೀಯರು ತ್ಯಾಗ ಮಾಡಿದ ದೇಶ ಇದು. ತಕ್ಷಶಿಲೆ ನಳಂದದಂತಹ ವಿದ್ಯಾ ಸಂಸ್ಥೆಗಳ ಸೇವೆ, ಗುರುಕುಲ ಪದ್ಧತಿ ಹೊಂದಿದಂತಹ ದೇಶ ನಮ್ಮದು. ಸರ್ಕಾರವೇ ಎಲ್ಲಾ ಮಾಡಲಿ ಎಂದು ಕೂರಬಾರದು. ಸಮಾಜದ ಪ್ರತಿಯೊಬ್ಬನಿಗೂ ಜವಾಬ್ದಾರಿ ಇರಬೇಕು. ಪ್ರತಿಯೊಬ್ಬರಿಗೂ ಪ್ರತಿ ಹಳ್ಳಿಗೂ ವಿದ್ಯೆ ಸಿಗುವಂತಾಗಬೇಕು ಎಂದರು.

ಭಾರತ ವಿಶ್ವಗುರು ಆಗಬೇಕು. ಪ್ರಧಾನಿಯವರ ಆಶಯವೂ ಅದೇ ಆಗಿದೆ. ದೇಶದ ಆರ್ಥಿಕ ಸ್ಥಿತಿ ಮುಂದಿನ ದಿನಗಳಲ್ಲಿ ಪ್ರಪಂಚಕ್ಕೆ ಮೊದಲಾಗಬೇಕು. ಹಳ್ಳಿಗಳ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಭಾರತದಲ್ಲಿ ಸ್ತ್ರೀ ಗೆ ಗೌರವ ಸಿಗಬೇಕು. ನಮ್ಮ ದೇಶದ ನದಿಗಳು ಗಂಗಾ, ಕಾವೇರಿ ತುಂಗಾ ಹೀಗೆ ಸ್ತ್ರೀ ನಾಮಗಳದ್ದಾಗಿವೆ. ಅಮೇರಿಕಾದಂತಹ ದೇಶದಲ್ಲಿ ಭಾರತದ ಪ್ರಧಾನಿಯವರ ಕಾರ್ಯಕ್ರಮಕ್ಕೆ ಅಲ್ಲಿನ ಅಧ್ಯಕ್ಷರು ಭಾಗವಹಿಸಿದ್ದಾರೆ. ಭಾರತ ಇತರ ಮಾದರಿಯಾಗಬೇಕು. ಯೋಗ ಪ್ರತಿಯೊಬ್ಬರಿಗೂ ಬೇಕು. ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕು. ಗಾಂಧೀಜಿಯವರ ಕನಸು ಅದೇ ಆಗಿತ್ತು. ಹಿಂದಿನ ಕಾಲದ ಗುರುಕುಲ ಅಭ್ಯಾಸಗಳಲ್ಲಿ ಯೋಗ ಮತ್ತು ಋತುವಿಗೆ ತಕ್ಕಂತೆ ಆಹಾರ ಸೇವನೆ, ಶಿಸ್ತುಬದ್ದ ಜೀವನ ಶೈಲಿಯಿಂದ ದೀರ್ಘಾಯುಶಿ ಆಗಿದ್ದರು. ಇಂದಿನ ಯುವಕರು ಪಿಸ್ಸಾ ಬರ್ಗರ್ ಎನ್ನದೆ ಉಪಯುಕ್ತ ಸ್ವಾದಿಷ್ಟ ಕ್ರಮಬದ್ದ ಆಹಾರ ಪದ್ಧತಿ ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಹಾಗೂ ಇತರರು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಜಿ.ವಿ. ವಿಶ್ವನಾಥ್ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. (ಎನ್.ಬಿ)

Leave a Reply

comments

Related Articles

error: