ಮೈಸೂರು

 ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ದೈಹಿಕ-ಬೌದ್ಧಿಕ ಶಕ್ತಿಗಳ ಮಹತ್ವ

ಮೈಸೂರು,ಸೆ.26:- ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಹಾಗೂ ಸುವರ್ಣ ಮಹೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ “ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ದೈಹಿಕ-ಬೌದ್ಧಿಕ ಶಕ್ತಿಗಳ ಮಹತ್ವ” ಕಾರ್ಯಕ್ರಮವನ್ನು ಇತ್ತೀಚೆಗೆ ಯುವರಾಜ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ  ಮಹಾರಾಜ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಟಿ.ಕೆ.ಕೆಂಪೇಗೌಡ, ಮಾತನಾಡಿ ತಮ್ಮ ಮೇಲಿನ ಉಪನ್ಯಾಸದಲ್ಲಿ ಶರೀರವನ್ನು ಚೆನ್ನಾಗಿ ಇಟ್ಟುಕೊಂಡಲ್ಲಿ ಮನಸ್ಸು ಚೆನ್ನಾಗಿರುತ್ತದೆ. ಆ ಮೂಲಕ ಎಲ್ಲ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. “ವಿದ್ಯೆಗಿಂತ ಬುದ್ಧಿ ಶ್ರೇಷ್ಠ, ಬುದ್ಧಿಗಿಂತ ಅನುಭವ ಶ್ರೇಷ್ಠ”. ಆದ್ದರಿಂದ ನಿಜವಾದ ಶಿಕ್ಷಣ ನಿಜವಾದ ಅನುಭವವೇ ಆಗಿರುತ್ತದೆ. ಅವುಗಳು ನಮ್ಮಲ್ಲಿ ಆತ್ಮ ಸ್ಥೈರ್ಯವನ್ನು ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ವಿವೇಕಾನಂದರು ಹೇಳುವಂತೆ “ಓ ನನ್ನ ಗೆಳೆಯರೆ, ಮೊದಲು ಬಲಶಾಲಿಗಳಾಗಿ, ಭಗವದ್ಗೀತೆಯನ್ನು ಓದುವ ಬದಲು, ಫುಟ್ ಬಾಲ್ ಅಥವಾ ಯಾವುದಾದರು ಆಟವನ್ನು ಆಡಿ ಅದರಿಂದ ದೈಹಿಕ ಸಾಮರ್ಥ್ಯ ಹೆಚ್ಚಿದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಉತ್ಸಾಹ ಬರುತ್ತದೆ ಎಂದರು.

ಯುವರಾಜ ಕಾಲೇಜು ಪ್ರಾಂಶುಪಾಲರಾದ ಡಾ.ಎಂ.ರುದ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಭಾರತದಲ್ಲಿ ಶೇಕಡಾ 50ರಷ್ಟು ಯುವಜನಾಂಗವಿದೆ. ಇಂದಿನ ಎಲೆಕ್ಟ್ರಾನಿಕ್ ಉಪಕರಣಗಳ ದಾಸರಾಗದೇ ಓದು, ಆಟ-ಪಾಠಗಳ ಕಡೆ ಹೆಚ್ಚಿನ ಗಮನ ಕೊಡಿ. ಆಟಗಳಿಂದ ಹೆಚ್ಚು-ಹೆಚ್ಚು ಸ್ನೇಹಿತರನ್ನು ಗಳಿಸಿ ಹೊಸ-ಹೊಸ ಅನುಭವ ಪಡೆಯುತ್ತೀರಿ,   ನಮ್ಮ ಸಂಸ್ಕೃತಿ, ಜೀವನದ ಮೌಲ್ಯಗಳನ್ನು ಕಳೆದುಕೊಂಡು ದೇಶದ ಅಭಿವೃದ್ದಿಗೆ ಮಾರಕರಾಗಬೇಡಿ ಎಂದು ಕಿವಿಮಾತು ಹೇಳಿದರು. ಗಾಂಧೀಜಿಯವರು ಸರಳತೆಯನ್ನು ಜೀವನದಲ್ಲಿ ಬಳಸಿದರು. ಅದಕ್ಕೆ ಇಂದಿಗೂ ಅವರನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ ಎಂದರು.

ಡಾ.ಭಟ್ ಸತೀಶ್ ಶಂಕರ್ ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿಗಳು ಇವರು “ತಂಬಾಕು ನಿಷೇಧ” ಪ್ರತಿಜ್ಞಾ ವಿಧಿಯನ್ನು   ಬೋಧಿಸಿದರು. ಡಾ. ಪಿ.ಜಿ.ಚಂದ್ರಶೇಖರ್, ಡಾ.ವೆಂಕಟೇಶ್, ಡಾ.ಚಂದ್ರಮೋಹನ್,   ಅನ್ನಪೂರ್ಣ ಮುಂತಾದ ಉಪನ್ಯಾಸಕರು ಹಾಗೂ ರಾ.ಸೇ.ಯೋ. ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: