ಕರ್ನಾಟಕಪ್ರಮುಖ ಸುದ್ದಿ

`ವಿಕ್ರಮ್ ಲ್ಯಾಂಡರ್’ ಲ್ಯಾಂಡಿಂಗ್ ನಲ್ಲಿ ಸಮಸ್ಯೆ: ಅಧ್ಯಯನಕ್ಕೆ ರಾಷ್ಟ್ರಮಟ್ಟದ ಸಮಿತಿ ರಚನೆ

ಬೆಂಗಳೂರು,ಸೆ.27-ಚಂದ್ರಯಾನ-2 ಮಿಷನ್ ನಲ್ಲಿ ವಿಕ್ರಮ್ ಲ್ಯಾಂಡರ್ ನ ಲ್ಯಾಂಡಿಂಗ್ ಸಮಸ್ಯೆ ಯಾಕಾಯಿತು ಎಂಬುದರ ಕುರಿತು ವಿಸ್ತೃತ ಅಧ್ಯಯನ ನಡೆಸಲು ರಾಷ್ಟ್ರಮಟ್ಟದ ಸಮಿತಿಯನ್ನು ರಚಿಸಲಾಗಿದೆ.

ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಕಠಿಣ ಲ್ಯಾಂಡಿಂಗ್ ಅನ್ನು ಕಂಡಿದೆ ಎಂದು ನಾಸಾ ತಿಳಿಸಿದೆ. ಈ ನಡುವೆ ಸಮಸ್ಯೆಯ ಕುರಿತು ವಿಸ್ತೃತ ಅಧ್ಯಯನ ನಡೆಸಲು ರಾಷ್ಟ್ರಮಟ್ಟದ ಸಮಿತಿ ತಯಾರಾಗಿದೆ.

ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ ಬಳಿಕವೇ ಭವಿಷ್ಯದ ಚಂದ್ರಯಾನದ ಬಗ್ಗೆ ಸಿದ್ಧತೆ ನಡೆಸಲಾಗುವುದು ಎಂದು ಇಸ್ರೊ ಮುಖ್ಯಸ್ಥ ಕೆ. ಶಿವನ್‌ ಹೇಳಿದ್ದಾರೆ.

ಚಂದ್ರಯಾನ-2ರಲ್ಲಿದ್ದ ಆರ್ಬಿಟರ್‌ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದ ಅವರು, ಮುಂದಿನ ಚಂದ್ರಯಾನಕ್ಕೆ ಅನುಮತಿ ಪಡೆಯಲು ಸಾಕಷ್ಟು ಪ್ರಕ್ರಿಯೆಗಳು ಇರುತ್ತವೆ. ಅದೆಲ್ಲವನ್ನೂ ಪಡೆದ ಬಳಿಕ ಘೋಷಣೆ ಮಾಡಲಾಗುವುದು ಎಂದರು.

ಮಾನವ ಸಹಿತ ಗಗನಯಾನ ಇಸ್ರೋ ಪಾಲಿಗೆ ಅತ್ಯಂತ ಮಹತ್ವದ ಕಾರ್ಯಾಚರಣೆಯಾಗಿದ್ದು, ಅದಕ್ಕಾಗಿ ಕಠಿಣ ಪರಿಶ್ರಮ ಪಡಲಾಗುತ್ತಿದೆ. 2022ಕ್ಕೆ ನಿಗದಿಯಾಗಿರುವ ಗಗನಯಾನದಲ್ಲಿ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

ನಾಸಾದಲ್ಲಿ ಗಗನನೌಕೆ ಸಿಸ್ಟಮ್‌ ಎಂಜಿನಿಯರ್‌ ಆಗಿರುವ ಆ್ಯನಿ ಡೆವೆರೆಕ್ಸ್‌, ಚಂದ್ರಯಾನ-2 ಭಾರತೀಯ ವಿಜ್ಞಾನಿಗಳ ಪಾಲಿಗೆ ಒಂದು ಕಲಿಕೆಯ ಅನುಭವವಾಗಿದ್ದು, ಚಂದ್ರನ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಲು ಇಸ್ರೋಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ವಿಶ್ವದ ಕುತೂಹಲಕ್ಕೆ ಕಾರಣವಾಗಿದ್ದ ಚಂದ್ರಯಾನ-2 ಯೋಜನೆ ಅಂತಿಮ ಘಟ್ಟದಲ್ಲಿ ಎಡವಿತ್ತು. ಚಂದ್ರನ ಅಂಗಳಕ್ಕೆ ಇಳಿಯುವ ಕೆಲ ಕ್ಷಣಗಳ ಮೊದಲ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. (ಎಂ.ಎನ್)

Leave a Reply

comments

Related Articles

error: