ಕ್ರೀಡೆ

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಫೈನಲ್ ನಲ್ಲಿ ಪರುಪಳ್ಳಿ ಕಶ್ಯಪ್ ಗೆ ಸೋಲು

ಇಂಚಿಯಾನ್,ಸೆ.28-ಕೊರಿಯಾ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಸೆಮಿಫೈನಲ್ ನಲ್ಲಿ ಭಾರತದ ಹಿರಿಯ ಅನುಭವಿ ಬ್ಯಾಡ್ಮಿಂಟನ್ ಪಟು ಪರುಪಳ್ಳಿ ಕಶ್ಯಪ್ ಸೋತು ನಿರ್ಗಮಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತೀಯರ ಹೋರಾಟ ಅಂತ್ಯಗೊಂಡಿದೆ.

ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಡೆದ ಸೆಮಿಫೈನಲ್ ನಲ್ಲಿ ಜಪಾನ್ ನ ಕೆಂಟೊ ಮೊಮೊಟಾ ವಿರುದ್ಧ 21-13, 21-15 ನೇರ ಸೆಟ್ಗಳ ಅಂತರದಲ್ಲಿ ಮುಗ್ಗರಿಸಿದರು.

ಪಂದ್ಯದ ಆರಂಭದಿಂದಲೇ ಕಶ್ಯಪ್ ಮೇಲೆ ಎದುರಾಳಿ ಹಿಡಿತವನ್ನು ಸಾಧಿಸಿದರು. ಅಲ್ಲದೆ ಕಶ್ಯಪ್ ತಮ್ಮದೇ ತಪ್ಪಿಗಾಗಿ ಭಾರಿ ಬೆಲೆ ಕಟ್ಟಬೇಕಾಯಿತು. ದ್ವಿತೀಯ ಸೆಟ್ ಒಂದು ಹಂತದಲ್ಲಿ 8-12 ಅಂಕಗಳ ಹಿನ್ನಡೆ ಅನುಭವಿಸಿದ್ದ ಕಶ್ಯಪ್ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಇದರ ಪರಿಣಾಮ 12-12 ಸಮಬಲ ಸಾಧಿಸಿದರು.

ಆದರೆ ಕೊನೆಯ ಹಂತದಲ್ಲಿ ಮತ್ತೆ ಎಡವಿ ಬಿದ್ದ ಪರಿಣಾಮ ಮೊಮೊಟಾ ಸತತ ಆರು ಅಂಕಗಳನ್ನು ಬಾಚಿಕೊಂಡು ಮುನ್ನಡೆಯನ್ನು 18-12 ಅಂಕಗಳಿಗೆ ಏರಿಸಿದರು. ನಂತರ ಕಶ್ಯಪ್ಗೆ ಪಂದ್ಯದಲ್ಲಿ ತಿರುಗಿ ಬೀಳುವ ಯಾವುದೇ ಅವಕಾಶ ದೊರಕಲಿಲ್ಲ. ಅಂತಿಮವಾಗಿ 40 ನಿಮಿಷಗಳ ಹೋರಾಟದಲ್ಲಿ ಶರಣಾದರು.

ಭಾರತದ ಅನುಭವಿ ಬ್ಯಾಡ್ಮಿಂಟನ್ ಪಟು ಆಗಿರುವ ಕಶ್ಯಪ್, 2014 ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದರು. ಇನ್ನು ಪ್ರಸಕ್ತ ಸಾಲಿನಲ್ಲೇ ಸಾಗಿದ ಕೆನಡಾ ಓಪನ್ ಬಿಡಬ್ಲ್ಯುಎಫ್ ಸೂಪರ್ 100 ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದರು. ಆದರೆ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ನಲ್ಲಿ ತನಗಿಂತಲೂ ಎಂಟು ವರ್ಷಗಳಷ್ಟು ಕಿರಿಯ ಆಟಗಾರನ ವಿರುದ್ಧ ಆಟ ನಡೆಯಲಿಲ್ಲ. (ಎಂ.ಎನ್)

 

Leave a Reply

comments

Related Articles

error: