ಮೈಸೂರು

ಮೈಸೂರಿನಲ್ಲಿ ಮತ್ತೆ ಕಳ್ಳರ ಕಾಟ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳುವು

ಮೈಸೂರಿನಲ್ಲಿ  ಕಳ್ಳರ ಕೈಚಳಕ ಜೋರಾಗಿಯೇ ನಡೆದಿದೆ. ಶುಕ್ರವಾರ ಕುವೆಂಪುನಗರದ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ.

ಜೆ.ಎಸ್.ಎಸ್. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುವೆಂಪು ನಗರ ನಿವಾಸಿ ಲಕ್ಷ್ಮೀಶ ಉಪಾಧ್ಯಾಯ ಎಂಬವರ ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಸುಮಾರು ನಲವತ್ತೈದು ಗ್ರಾಂ ಚಿನ್ನಾಭರಣ, ಅಂದಾಜು 60ರಿಂದ 70ಸಾವಿರ ರೂ.ನಗದನ್ನು ಕದ್ದು ಪರಾರಿಯಾಗಿದ್ದಾರೆ. ಮನೆಯವರೆಲ್ಲ ಸೇರಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರವನ್ನು ನೋಡಲು ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿದ ಕಳ್ಳರು ಈ ದುಷ್ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಕುವೆಂಪುನಗರ ಠಾಣೆಯ ಇನ್ಸಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳು, ಬೆರಳಚ್ಚು ತಜ್ಞರ ತಂಡ, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚೆಗೆ ಮತ್ತೆ ಮೈಸೂರಿನಲ್ಲಿ ಕಳ್ಳರ ಕಾಟ ಜಾಸ್ತಿಯಾಗ ತೊಡಗಿದ್ದು, ಜನರ ನಿದ್ದೆಗೆಡಿಸಿದೆ. ಒಂದು ವಾರಗಳ ಕಾಲ ಎಲ್ಲಿಯಾದರೂ ಮನೆಯಿಂದ ಹೊರಗೆ ಹೋಗುವುದಿದ್ದರೆ ಅಕ್ಕಪಕ್ಕದವರಿಗೆ ಅಥವಾ ಪೊಲೀಸರಿಗೆ ತಿಳಿಸಿ ಹೋಗಿ ಎಂದು ಪೊಲೀಸರು ತಿಳಿಸುತ್ತಿದ್ದರು. ಇದೀಗ ಮೂರು ಗಂಟೆ ಸಮಯ ಹೊರಗೆ ಹೋಗಬೇಕಾದರೂ ಹೇಳಿ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುವಂತೆ ಕಂಡು ಬರುತ್ತಿದೆ.

Leave a Reply

comments

Related Articles

error: