ಪ್ರಮುಖ ಸುದ್ದಿಮೈಸೂರು

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ಸಾಹಿತಿ ಎಸ್.ಎಲ್.ಭೈರಪ್ಪ

ವಿಜ್ಞಾನಿಗಳೇ ದೇವರ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾರೆ : ವಿಚಾರವಾದಿಗಳಿಗೆ ಸಾಹಿತಿ ಎಸ್.ಎಲ್.ಭೈರಪ್ಪ ತಿರುಗೇಟು

ಮೈಸೂರು,ಸೆ.29:- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ  ಚಾಲನೆ ದೊರೆಯಿತು. ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 9.30ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ, ಹಿರಿಯ ಸಾಹಿತಿ ಡಾ ಎಸ್​ ಎಲ್​​​ ಭೈರಪ್ಪ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿ ದೀಪ ಬೆಳಗುವುದರೊಂದಿಗೆ  ವಿಶ್ವವಿಖ್ಯಾತ ದಸರಾ ಮಹೋತ್ಸವ ಉದ್ಘಾಟಿಸಿದರು.

ಚಾಮುಂಡಿ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಬೃಹತ್​ ವೇದಿಕೆಯಲ್ಲಿ ತಾಯಿ ಚಾಮುಂಡೇಶ್ವರಿಗೆ ಸಿಎಂ ಯಡಿಯೂರಪ್ಪ  ಪುಷ್ಪಾರ್ಚನೆ ಮಾಡಿದರು.  ವೇದಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದಸರಾ ಉದ್ಘಾಟನೆ ನೆರವೇರಿಸಿದ ಸಾಹಿತಿ ಎಸ್.ಎಲ್.ಭೈರಪ್ಪನವರಿಗೆ ಶಾಲು ಹೊದೆಸಿ, ಹಾರ ಹಾಕಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಸಾಹಿತಿ ಎಸ್.ಎಲ್.ಭೈರಪ್ಪನವರು ದಸರಾ ಉದ್ಘಾಟಕನಾಗಿ ಸರ್ಕಾರ ನನ್ನನ್ನು ಆರಿಸಿತು. ಪತ್ರಿಕೆಗಳಲ್ಲಿ ಈ ಕುರಿತು ಬಂದ ಮೇಲೆ ನನ್ನಲ್ಲಿ ಒಬ್ಬರು ಕೇಳಿದರು. ನೀವು ದಸರಾ ಉದ್ಘಾಟನೆ ಒಪ್ಪಿಕೊಂಡ್ರಾ? ಅಂತ ಹೌದು ಯಾಕೆ ಅಂತ ಕೇಳಿದೆ. ನೀವು ಸಾಹಿತಿಗಳಲ್ವಾ? ಅಂದರು. ಯಾಕೆ ಸಾಹಿತಿಗಳು ಒಪ್ಕೋಬಾರದಾ ಅಂತ ಕೇಳಿದೆ. ಅದಕ್ಕವರು ಅಲ್ಲಿ ಹೋದರೆ ದೇವರಿಗೆ ನಮಸ್ಕಾರ ಮಾಡಬೇಕು, ಮಂಗಳಾರತಿ ತಗೋಬೇಕು ಅಂದರು. ವಿಚಾರವಾದಿಗಳಿಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದಿದ್ದರು. ನನಗೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ಹೇಳುತ್ತಿಲ್ಲ. ಸಾಹಿತಿ ದೇವರನ್ನು ನಂಬಬಾರದು ಎಂಬ ಅಭಿಪ್ರಾಯ ಜನರಲ್ಲಿ ಬಂದಿದೆ ಎಂದು ಪರೋಕ್ಷವಾಗಿ ವಿಚಾರವಾದಿಗಳಿಗೆ ತಿರುಗೇಟು ನೀಡಿದರು.   ವಿದ್ಯಾರ್ಥಿ ಇದ್ದಾಗ ವಾರಕ್ಕೊಂದು ಸಲ ಮೆಟ್ಟಿಲು ಮೂಲಕ ಹತ್ತಿ ಬಂದು ದೇವಿಯ ದರ್ಶನ ಪಡೆದು ಹೋಗುತ್ತಿದ್ದೆ. ಆದರೆ ಈಗ ವಯಸ್ಸಾಗಿ, ಕಾಲು ನೋವು ಕಾಡುತ್ತಿದೆ. ಅದಕ್ಕಾಗಿ ವರ್ಷಕ್ಕೊಂದು ಸಲ ವಾಹನದಲ್ಲಿ ಬಂದು ದರ್ಶನ ಪಡೆದು ಹೋಗುತ್ತೇನೆ ಎಂದು ತಿಳಿಸಿದರು. ನನ್ನ ಮೂರು ಜನ ಮೊಮ್ಮಕ್ಕಳಿಗೂ ಮೂರು ತಿಂಗಳಾಗುವ ಮುನ್ನ ದೇವಸ್ಥಾನಕ್ಕೆ ಬಂದು ಹೊಸಿಲು ಮೇಲೆ ಮಲಗಿಸಿ ತೀರ್ಥ ಹಾಕಿಸಿಕೊಂಡು ಹೋಗಿದ್ದೇನೆ. ಆದರೆ, ಕೆಲವರು ನೀವು ವಿಚಾರವಾದಿಗಳು, ನಿಮಗೆ ದೇವರ ಮೇಲೆ ನಂಬಿಕೆ ಇಲ್ಲ ಅಂತ ಹೇಳಿದ್ದರು. ಆದರೆ,  ದೇವರ ಮೇಲೆ ನಂಬಿಕೆ ಇಲ್ಲ ಎಂದು ನಾನು ಎಂದೂ ಹೇಳಿಲ್ಲ ಎಂದು  ಸ್ಪಷ್ಟಪಡಿಸಿದ ಅವರು ವಿಚಾರವಾದಿಗಳು ದೇವರು ಇಲ್ಲ ಎನ್ನುವ ಭಾವನೆ ಹರಡಿದ್ದಾರೆ ಎನ್ನುತ್ತ ದೇವರು ಇದಾನೋ ಇಲ್ಲವೋ ಎಂಬುದಕ್ಕೆ ಕಥೆಯೊಂದನ್ನು ಹೇಳಿದರು.  ವಿಜ್ಞಾನಿಗಳೇ ದೇವರ ಅಸ್ತಿತ್ವದ ಬಗ್ಗೆ ಒಪ್ಪಿಕೊಳ್ಳುತ್ತಾರೆ. ಅವರಿಗೇ ದೇವರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ನಮ್ಮ ಸಾಹಿತಿಗಳು ತಮಗೆ ಎಲ್ಲವೂ ಗೊತ್ತು ಎಂದು ಹೇಳುತ್ತಾರೆ, ಕೆಲವು ಸಾಹಿತಿಗಳು ದೇವರೇ ಇಲ್ಲ ಎನ್ನುತ್ತಾರೆ . ಆದ್ರೆ ನಮ್ಮ‌ ಕೆಲ ಸಾಹಿತಿಗಳ ಮಾತು ದಾರ್ಷ್ಯದ ಮಾತು ಎನಿಸಿಕೊಳ್ಳುತ್ತೆ. ದೇವರ ಅಸ್ತಿತ್ವವನ್ನೇ ಅವರು ನಂಬುವುದಿಲ್ಲ.  ದೇವರನ್ನು ನಂಬದವರು ಪ್ರಗತಿಪರರು ಎನ್ನುತ್ತಾರೆ ಆ ರೀತಿ ಏಕೆ‌ ತಿಳಿದುಕೊಳ್ಳುತ್ತಾರೊ ಗೊತ್ತಿಲ್ಲ. ಪ್ರಪಂಚದಲ್ಲಿ ದೇವರು ಎನ್ನುವುದು ಇದೆ. ಪ್ರಗತಿಪರರು ಇಡೀ ಪ್ರಪಂಚ ನಮಗೆ ಗೊತ್ತಿದೆ, ಹೀಗಾಗಿ ದೇವರು ಇಲ್ಲ ಎಂದು ವಾದಿಸುತ್ತಾರೆ  ಎಂದು ವಿಚಾರವಾದಿಗಳ ವಿರುದ್ಧ ಕಿಡಿಕಾರಿದರು.

ಈ ದೇಶದಲ್ಲಿ ಹೆಣ್ಣಿಗೆ ಬೆಲೆಯೇ ಇಲ್ಲ ಎಂದು ಅನೇಕರು ಹೇಳುತ್ತಾರೆ. ಮೊದಲು ಹೆಂಗಸರಿಗೆ ಮನೆಯಿಂದ ಹೊರಗೆ ಬರಲು ಬಿಡುತ್ತಲೇ ಇರಲಿಲ್ಲ. ಅದಕ್ಕೆ ಕಾರಣವೂ ಇದೆ. ಆಗ ಆಕೆ ಮನೆಯಿಂದ ಹೊರಗೆ ಬಂದರೆ ಆಕೆಯ ಮೇಲೆ ಆಕೆಯನ್ನು ಎತ್ತಿಕೊಂಡು ಹೋಗುತ್ತಿದ್ದರು. ಹೀಗಾಗಿ, ಮನೆಯೊಳಗೆ ಇರುವಂತೆ ಸೂಚಿಸಲಾಗುತ್ತಿತ್ತು. ಅದಕ್ಕೂ ಮೊದಲು ಮಹಿಳೆಯರಿಗೆ ಯಾವುದೇ ದಿಗ್ಭಂದನ ಇರಲಿಲ್ಲ  ಆದರೆ ಆ ರೀತಿ ಹೇಳುವುದು ಸರಿಯಲ್ಲ. ಇಂದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ನೋಡಿ 50% ಹೆಣ್ಣು ಮಕ್ಕಳೇ ಇದ್ದಾರೆ. ಅಂದರೆ ಹೆಣ್ಣುಮಕ್ಕಳನ್ನು ತುಳಿಯಲಿಕ್ಕೆ ಇದನ್ನೆಲ್ಲ ಮಾಡಿದ್ದಾ? ಇಂದು ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರಿದ್ದಾರೆ . ಇದು ನಮ್ಮಲ್ಲಿರುವ ತಪ್ಪು ಗ್ರಹಿಕೆ ಎಂದರು.

ಪ್ರಕೃತಿಯಿಂದ ದೇವರು ಸೃಷ್ಟಿಯಾಗುತ್ತದೆ. ಪ್ರಕೃತಿಯಿಂದ ಸೃಷ್ಟಿಯಾಗೋದು ಹೆಣ್ಣು ದೇವತೆ. ಯಾವುದೇ ಕಾರ್ಯಕ್ರಮ ಶುರುವಾಗೋದು ಗ್ರಾಮ ದೇವತೆ ಯಿಂದ. ಹಾಗಾಗಿ ಹೆಣ್ಣು ದೇವತೆಯನ್ನು ಹೆಚ್ಚು ಪೂಜಿಸಲಾಗುತ್ತದೆ. ಗಂಡು ದೇವರು ಕೂಡ ಇದೆ. ಅಯ್ಯಪ್ಪಸ್ವಾಮಿ ಕುರಿತು ಪ್ರಸ್ತಾಪಿಸಿದ ಅವರು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10 ವರ್ಷದಿಂದ ಮಧ್ಯವಯಸ್ಸಿನವರೆಗಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಅನೇಕ ಆಧುನಿಕ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದರು. ಋತುಮತಿಯಾದಾಗ ಆಫೀಸಿಗೆ ಹೋಗಿ ಕೆಲಸ ಮಾಡುವುದು ಬೇರೆ, ದೇವಸ್ಥಾನಕ್ಕೆ ಪ್ರವೇಶ ಮಾಡುವುದು ಬೇರೆ. ಆ ವ್ಯತ್ಯಾಸವನ್ನು ಮಹಿಳೆಯರು ತಿಳಿದುಕೊಳ್ಳಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲೂ ವಿಚಾರಣೆಯಾಗುವಂತಾಯಿತು. ಕೇರಳದ ಕಮ್ಯುನಿಸ್ಟ್ ಗಳು ಮಹಿಳೆಯರನ್ನು ಬಲವಂತವಾಗಿ ಶಬರಿಮಲೆ ದೇವಸ್ಥಾನಕ್ಕೆ ನುಗ್ಗಿಸಿದರು. ಅದೆಲ್ಲ ಅವರವರ ನಂಬಿಕೆಗೆ ಬಿಟ್ಟಿದ್ದು ಎಂದ ಭೈರಪ್ಪ  ಅವರು ತನಗೆ ಭೈರಪ್ಪ ಎಂಬ ಹೆಸರನ್ನು ಯಾಕೆ ಇಟ್ಟರೆಂದು ವಿವರಿಸಿದರು.

ಚಾಮುಂಡೇಶ್ವರಿ ಎಂಬ ಕಲ್ಪನೆ ಹೇಗೆ ಬಂತು ಅಂದರೆ ಮಹಿಷಾಸುರನೆಂಬ ರಾಕ್ಷಸನಿದ್ದ.  ಪ್ರಪಂಚದಲ್ಲಿ ಎಲ್ಲರಿಗೂ ಹಿಂಸೆ ಕೊಡ್ತಿದ್ದ. ಜನರೆಲ್ಲ  ದೇವತೆಗಳಿ ಇವನಿಂದ ಬಿಡುಗಡೆ ಮಾಡಿಸಿ ಎಂದು ಬೇಡಿಕೊಂಡಿದ್ದರು. ದೇವತೆಗಳಳೆಲ್ಲ ಯುದ್ಧ ಹೂಡಿದರು. ಶಕ್ತಿದೇವತೆಗೆ ನಮಗೆ ಗೆಲ್ಲಲು ಸಾದ್ಯವಾಗಿಲ್ಲ ಎಂದು ಪ್ರಾರ್ಥಿಸಿ ನೀನು ಹೇಳಿದಂತೆ ನಾಶವು ಕೇಳ್ತೇವೆ ಎಂದು ಪ್ರಾರ್ಥಿಸಿದರು. ಅದರಂತೆ ಚಾಮುಂಡಿ ಯುದ್ಧ ಮಾಡಿ ಗೆಲುವು ಸಾಧಿಸಿದಳು ಎಂದು ವಿವರಿಸಿದರು. ಮೊದಲು  ಹೆಣ್ಣು ದೇವತೆಯ ಪೂಜೆಯ ನಂತರ ದಂಡು ದೇವರ ಪೂಜೆ ನಡೆಯುತ್ತದೆ. ಇಲ್ಲಿ ಇಕ್ವಾಲಿಟಿ ಬರಲ್ಲ. ಯಾರು ಮೇಲೆ ಯಾರು ಕೆಳಗೆ ಎಂಬ ಪ್ರಶ್ನೆ ಬರಲ್ಲ ಎಂದರು.

ಯಾತ್ರೆಗೂ ಜಾತ್ರೆಗೂ ಏನು ವ್ಯತ್ಯಾಸ. ಉತ್ತರ ಭಾರತದಲ್ಲಿ  ಯಕಾರ ಜಕಾರವಾಗತ್ತೆ. ಯಾದವ ಜಾದವ್ ಆಗತ್ತೆ. ಯೋಗಿ ಆದಿತ್ಯ ಅನ್ನೋದು ಜೋಗಿ ಆದಿತ್ಯ ಅಂತಾರೆ. ಸಂಸ್ಕೃತದ ಮೂಲಕ್ಕೆ ಯೋಗಿ ಸರಿ. ಹಾಗೆ ಯಾತ್ರೆ ಎನ್ನೋದು ಜಾತ್ರೆ ಆಗತ್ತೆ. ಯಾತ್ರೆ ಜಾತ್ರೆ ಆದಾಗ ವ್ಯತ್ಯಾಸವಾಗತ್ತೆ. ಯಾತ್ರೆಯಲ್ಲಿ ವ್ಯಾಪಾರ, ಜನಸಂಖ್ಯೆ ಇರಲ್ಲ. ಯಾತ್ರೆಗೆ ಹೋಗೋದು ದೇವರನ್ನು ಏಕಾಂತದಲ್ಲಿ ಪ್ರಾರ್ಥಿಸೋದಕ್ಕೆ . ನಮ್ಮ ದೇಶದ ಸಂಸ್ಕೃತಿ ಗುಡ್ಡ, ಪರ್ವತ ಹತ್ತಿ ಹೋದರೆ ಅಲ್ಲಿ ಒಂದು ಗುಡಿ ಕಟ್ಟಿರ್ತಾರೆ. ಅಲ್ಲಿ ಒಂದೆರಡು ಗಂಟೆ ಕುಳಿತು ಮನಶ್ಯಾಂತಿ ಪಡೆಯುತ್ತೇವೆ. ಯಾವಾಗ ದೇವಸ್ಥಾನ ಹೆಚ್ಚು ಪ್ರಚಲಿತಕ್ಕೆ ಬರತ್ತೋ ಅಲ್ಲಿ ಸೌಲಭ್ಯ ವನ್ನು ಸರ್ಕಾರ ಹೆಚ್ಚಿಸತ್ತೆ. ಅಲ್ಲಿ ಹೆಲಿಕಾಪ್ಟರ್ ಬರೋ ತರನೂ ಮಾಡ್ತಾರೆ. ದೇವರು ಎಂಬ ಕಲ್ಪನೆ ಇಲ್ಲದಿದ್ದರೆ ಜಾತ್ರೆ ಆಗಲ್ಲ. ಸೌಲಭ್ಯ ಜಾಸ್ತಿ ಮಾಡಲು ಹೋದರೆ ದೇವರು ನಮ್ಮ ನಡುವಿನ ಏಕಾಂತತೆ ಹೊರಟು ಹೋಗತ್ತೆ ಎಂದರು.

ಬೆಟ್ಟಕ್ಕೆ ಬರುವುದು ಶಾಪಿಂಗ್ ಗೋ? ಮನಶ್ಯಾಂತಿಗೋ?

ಚಾಮುಂಡಿಬೆಟ್ಟದಲ್ಲಿ ವಾಣಿಜ್ಯ ಮಳಿಗೆಗಳ ಸಂಕೀರ್ಣ ನಿರ್ಮಾಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಬೆಟ್ಟಕ್ಕೆ ಬರೋದು ಮನಶ್ಯಾಂತಿಗಾ? ಅಥವಾ ಶಾಪಿಂಗ್ ಗಾ? ಅದೇನು ಪ್ರವಾಸೀ ಸ್ಥಳವಾ ? ಅಥವಾ ಧಾರ್ಮಿಕ ಕೇಂದ್ರವಾ? ಶಾಪಿಂಗ್ ಮಾಡಲು ಮೈಸೂರು ನಗರದ ಒಳಗೆ ವ್ಯವಸ್ಥೆ ಇಲ್ವಾ ? ಎಂದರು. ಮೂಲಭೂತ ಸೌಕರ್ಯ ಕಲ್ಪಿಸಿಕೊಡಿ ಅಂದರೆ ಶೌಚಾಲಯ, ಊಟ,ಉಪಹಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದರು.

ಕಾಯಕ ನಿಷ್ಠೆ ಹಾಳು ಮಾಡಿದ್ದೇ ರಾಜಕಾರಣಿಗಳು

ಬಸವಣ್ಣ ದೊಡ್ಡ ಸಮಾಜ ಸುಧಾರಕ. ಕಾಯಕ ಪಾವಿತ್ರ್ಯ ಮತ್ತು ಜಾತಿ ವಿನಾಶದ ಬಗ್ಗೆ ಮಾತಾಡಿ ಅದರಂತೆ ನಡೆದವರು ಬಸವಣ್ಣ. ಕಾಯಕ ಪಾವಿತ್ರ್ಯ ಪಾಶ್ಚಿಮಾತ್ಯ ದೇಶಗಳಲ್ಲಿ ಯಾಥವತ್ತಾಗಿ ಜಾರಿಯಾಗಿದೆ. ಈ ದೇಶದಲ್ಲಿ ಕಾಯಕ ನಿಷ್ಠೆ ಯನ್ನು ಹಾಳು ಮಾಡಿದ್ದು ರಾಜಕಾರಣಿಗಳು.  ರಾಜಕೀಯ ನಾಯಕರ ಪಕ್ಕದಲ್ಲೇ ನಿಂತು  ಕಿವಿ ಹಿಂಡಿದ ಅವರು ಕಾಯಕಯೋಗಿಗಳನ್ನು ಹಾಳು ಮಾಡಿದ್ದೇ ಜನಪ್ರತಿಧಿಗಳು ಎಂದು ತರಾಟೆಗೆ ತೆಗೆದುಕೊಂಡರು.

ಸಮಾರಂಭದಲ್ಲಿ ಕೇಂದ್ರ ಸಚಿವರುಗಳಾದ ಡಿ ವಿ ಸದಾನಂದ ಗೌಡ, ಪ್ರಲ್ಹಾದ್​​ ಜೋಶಿ, ಸುರೇಶ್ ಅಂಗಡಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ,  ಸಚಿವರಾದ  ವಿ.ಸೋಮಣ್ಣ, ಸಿ ಟಿ ರವಿ,   ಸಂಸದ ಪ್ರತಾಪ್ ಸಿಂಹ,  ಶಾಸಕರುಗಳಾದ ಜಿ ಟಿ ದೇವೇಗೌಡ,  ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್​​ ಪುಷ್ಪಲತಾ ಜಗನ್ನಾಥ್, ಜಿ.ಪಂ ಅಧ್ಯಕ್ಷೆ  ಪರಿಮಳ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ , ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಮತ್ತಿತರರು  ಭಾಗವಹಿಸಿದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ  ಬೆಟ್ಟಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕಪ್ಪು ಬಾವುಟ ತೋರಿಸಲು ಯತ್ನಿಸಿದ ಹಿನ್ನಲೆ  ಪೊಲೀಸರು 13ಮಂದಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ಘಟನೆ ನಡೆಯಿತು.

ಸಿಬ್ಬಂದಿಗಳ ಜೊತೆ ವಾಗ್ವಾದಕ್ಕಿಳಿದ ಸಚಿವ ಡಿವಿಎಸ್

ದಸರಾ ಉದ್ಘಾಟನೆಗೆ ಬಂದಿದ್ದ  ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಚಾಮುಂಡಿ ಬೆಟ್ಟದ ಸಿಬ್ಬಂದಿ ಜೊತೆ  ವಾಗ್ವಾದ ನಡೆಸಿದ ಘಟನೆ  ನಡೆದಿದ್ದು,  ಸದಾನಂದಗೌಡರ ಭದ್ರತಾ ಸಿಬ್ಬಂದಿ ಜೊತೆ ಚಾಮುಂಡಿ ಬೆಟ್ಟದ ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರು ಎಂಬ ಕಾರಣಕ್ಕೆ  ಕೇಂದ್ರ ಸಚಿವ ಸದಾನಂದ ಗೌಡ ಕೋಪಗೊಂಡಿದ್ದರು. ದಸರಾ ಉದ್ಘಾಟನೆಗೆ ಬರುವುದಿಲ್ಲ, ನಾನು ವಾಪಾಸ್ ಹೋಗ್ತೀನಿ ಎಂದ ಕೇಂದ್ರ ಸಚಿವರನ್ನು ಪೊಲೀಸರು ಸಮಾಧಾನಪಡಿಸಿ ಒಳಗೆ ಕಳುಹಿಸಿದ ಘಟನೆ ನಡೆದಿದೆ.

ದಸರಾ ವೇದಿಕೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ರೇಷ್ಮೆ ಪಂಚೆ- ಶರ್ಟ್ ಧರಿಸಿಕೊಂಡು ಮಿಂಚುತ್ತಿದ್ದ ದೃಶ್ಯ ಕಂಡು ಬಂದಿದ್ದು,  ಜೆಡಿಎಸ್ ಪಕ್ಷದ ಏಕೈಕ ಪ್ರತಿನಿಧಿಯಾಗಿ ಪಾಲ್ಗೊಂಡು ವೇದಿಕೆಯಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪಕ್ಕದ ಕುರ್ಚಿಯಲ್ಲಿಯೇ  ಕುಳಿತಿದ್ದರು. (ಜಿ.ಕೆ,ಕೆ.ಎಸ್,ಎಸ್.ಎಚ್)

Leave a Reply

comments

Related Articles

error: