ಮೈಸೂರು

ಮೈಸೂರು ದಸರಾ  ವೀಕ್ಷಣೆಗೆ ಅರಮನೆ ಮತ್ತು ಬನ್ನಿಮಂಟಪಕ್ಕೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ಸೂಚನೆಯನ್ನು ಪಾಲಿಸಿ :   ಕೆ.ಟಿ.ಬಾಲಕೃಷ್ಣ

ಮೈಸೂರು,ಸೆ.30:- ಮೈಸೂರು ದಸರಾ  ವೀಕ್ಷಣೆಗೆ ಅರಮನೆ ಮತ್ತು ಬನ್ನಿಮಂಟಪಕ್ಕೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ನಿಮಗೆ ನೀಡಿರುವ ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಅರಮನೆ ಆವರಣಕ್ಕೆ ಹಾಗೂ ಬನ್ನಿಮಂಟಪಕ್ಕೆ ಆಗಮಿಸುವಾಗ ನಿಗದಿಪಡಿಸಿದ ಪ್ರವೇಶ ದ್ವಾರಗಳಿಂದಲೇ ಆಗಮಿಸಬೇಕು. ಸಾರ್ವಜನಿಕರು ಭದ್ರತಾ ಸಿಬ್ಬಂದಿಗಳು ತಪಾಸಣೆ ಮಾಡುವಾಗ ಸಹಕರಿಸಬೇಕು. ಅರಮನೆ ಹಾಗೂ ಬನ್ನಿಮಂಟಪಕ್ಕೆ ಆಗಮಿಸುವಾಗ ಲೋಹ ಶೋಧಕ ಯಂತ್ರದ ಮೂಲಕ ತಪಾಸಣೆಗೆ ಒಳಪಟ್ಟು, ನಂತರ ಕಾರ್ಯಕ್ರಮದ ಸ್ಥಳಕ್ಕೆ ತೆರಳಬೇಕು. ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರೀತಿಯ ಆಯುಧಗಳು, ಚಾಕು, ಗಾಜಿನ ಬಾಟಲ್‍ಗಳು ಮತ್ತು ದೊಡ್ಡ ಬ್ಯಾಗುಗಳನ್ನು ತರಬಾರದು. ಅರಮನೆಯ ಆವರಣದಲ್ಲಿ ಹಾಗೂ ಬನ್ನಿಮಂಟಪದಲ್ಲಿ ಯಾವುದೇ ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟಿಕೆ ಸಾಮಾನುಗಳು ಹಾಗೂ ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ತಂಬಾಕು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬೆಂಕಿ ಉತ್ಪತ್ತಿ ಮಾಡುವ ಬೆಂಕಿಪೊಟ್ಟಣ, ಲೈಟರ್, ಪಟಾಕಿ ಹಾಗೂ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಬರಬಾರದು. ಕಾರ್ಯಕ್ರಮ ವೀಕ್ಷಣೆಗೆ ಬರುವವರು ತಮ್ಮ ವಾಹನಗಳನ್ನು ಸಂಚಾರಿ ಪೊಲೀಸರು ನಿಗದಿಪಡಿಸಿರುವ ಸ್ಥಳದಲ್ಲೇ ನಿಲ್ಲಿಸಬೇಕು. ಸಾರ್ವಜನಿಕರು ತಮಗೆ ಮೀಸಲಿರುವ ಆಸನಗಳಲ್ಲಿಯೇ ಕುಳಿತುಕೊಳ್ಳಬೇಕು. ದಸರಾ ಕಾರ್ಯಕ್ರಮದ ವೀಕ್ಷಣೆಗೆ ಅರಮನೆ ಹಾಗೂ ಬನ್ನಿಮಂಟಪಕ್ಕೆ ಆಗಮಿಸುವಾಗ ಸಾರ್ವಜನಿಕರು ಬೆಲೆ ಬಾಳುವ ವಸ್ತುಗಳನ್ನು ಅಥವಾ ಆಭರಣಗಳನ್ನು ತರಬಾರದು ಎಂದು  ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: