ದೇಶಪ್ರಮುಖ ಸುದ್ದಿ

ಉತ್ತರ ಪ್ರದೇಶ : ನಕಲಿ ಮತ ಚಲಾಯಿಸಲು ಕೃತಕ ಬೆರಳು ಲಭ್ಯ; ಪ್ರಜಾಪ್ರಭುತ್ವದ ಆಶಯವೇ ಬುಡಮೇಲು

ಲಖನೌ: ಅಧಿಕಾರದ ಹಪಹಪಿಗೆ ಬೀಳುವ ರಾಜಕೀಯ ನಾಯಕರು ಭಾರತದಲ್ಲಿ ಅಡ್ಡ ಮಾರ್ಗ ತುಳಿಯುವುದು ಸಾಮಾನ್ಯ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ನಕಲಿ ಬೆರಳುಗಳು.

ಹೌದು. ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಜಕೀಯ ಹುರಿಯಾಳುಗಳು ಹಿಂದೆಂದೂ ಕೇಳಿರದ ಕೃತ್ಯಕ್ಕೆ ಚಾಲನೆ ನೀಡಿದ್ದಾರೆ.

ಚುನಾವಣೆಯಲ್ಲಿ ನಕಲಿ ಮತ ತಡೆಯಲು ಕೈ ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ. ಆದಿಕಾಲದಿಂದಲೂ ಚಾಲನೆಯಲ್ಲಿರುವ ಈ ವ್ಯಸ್ಥೆಯನ್ನು ಬುಡಮೇಲು ಮಾಡುವಂತೆ ಉತ್ತರ ಪ್ರದೇಶ ಚುನಾವಣೆಯಲ್ಲಿ ರಾಜಕೀಯ ಹುರಿಯಾಳುಗಳು ಮತ್ತು ದುಷ್ಕರ್ಮಿಗಳು ನಕಲಿ ಕೈ ಬೆರಳನ್ನು ಅಳವಡಿಸಿಕೊಂಡು ಮತ ಚಲಾಯಿಸುತ್ತಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಮಾಧ್ಯಮ ಸಂಸ್ಥೆಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಕೃತ್ಯ ಬೆಳಕಿಗೆ ಬಂದಿದ್ದು, ನಕಲಿ ಬೆರಳಿನ ದಂಧೆ ಬಯಲಾಗಿದೆ. ದೆಹಲಿ ಮೂಲದ ಶಂಬುಕುಮಾರ್ ಎನ್ನುವವರು ತಮ್ಮ ಕೃತಕ ಅಂಗ ತಯಾರಿಕಾ ಕಂಪನಿಗೆ ಪ್ರಮುಖ ರಾಜಕೀಯ ಪಕ್ಷವೊಂದು ಭಾರೀ ಪ್ರಮಾಣದ ನಕಲಿ ಬೆರಳು ಪೂರೈಸಲು ಆರ್ಡರ್ ನೀಡಿದೆ ಎಂದು ಹೇಳಿದ್ದಾರೆ. ಒಂದು ವೇಳೆ ನಕಲಿ ಬೆರಳು ಬಳಸಿದ್ದೇ ಆದಲ್ಲಿ ಒಂದೇ ಮತದಾರ ವಿವಿಧ ಮತಗಟ್ಟೆಗಳಲ್ಲಿ ಹಲವಾರು ಬಾರಿ ಮತಚಲಾಯಿಸಲು ಸಾಧ್ಯವಾಗುತ್ತದೆ. ದೆಹಲಿಯ ವಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಹೇಳಿರುವ ಪ್ರಕಾರ, ಕೃತಕವಾಗಿ ಸಂಯೋಜಿಸಿದ 10 ಕೈಬೆರಳುಗಳನ್ನು ತಯಾರಿಸಲು 1.10 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನು ಧರಿಸಿದಾಗ ಸಾಮಾನ್ಯ ಕೈ ಬೆರಳಿನಂತೆಯೇ ತೋರುತ್ತದೆ. ಚುನಾವಣಾ ಅಧಿಕಾರಿಗಳು ಮತದಾರ ಕೃತಕ ಕೈ ಬೆರಳು ಅಳವಡಿಸಿಕೊಂಡಿದ್ದನ್ನು ಪತ್ತೆ ಮಾಡುವುದು ಕಷ್ಟಕರ. ಬೆರಳಿಗೆ ಶಾಹಿ ಹಾಕುವಾಗಲೂ ವ್ಯತ್ಯಾಸ ಗೊತ್ತಾಗುವುದಿಲ್ಲ. ಒಂದು ಕೃತಕ ಬೆರಳು ಬಳಸಿ 5 ಸಲ ಮತಹಾಕಬಹುದಾಗಿದೆ ಎಂಬ ಸಂಗತಿ ರಹಸ್ಯ ಕಾರ್ಯಾಚರಣೆಯಿಂದ ಬಹಿರಂಗಗೊಂಡಿದ್ದು, ಫಲಿತಾಂಶದ ಮೇಲೆ ಪ್ರಭಾವ ಬೀರಿ ಪ್ರಜಾಪ್ರಭುತ್ವದ ಆಶಯವನ್ನೇ ಬುಡಮೇಲು ಮಾಡುವ ಇಂತಹ ಪ್ರವೃತ್ತಿ ತಲೆಯೆತ್ತದಂತೆ ತಕ್ಷಣ ತಡೆಯಬೇಕಾಗಿದೆ.

Leave a Reply

comments

Related Articles

error: