ಕ್ರೀಡೆ

ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾದ ಟೀಂ ಇಂಡಿಯಾ

ವಿಶಾಖಪಟ್ಟಣ,ಅ.1-ಟೆಸ್ಟ್ ಕ್ರಿಕೆಟ್ ನಲ್ಲಿ ಹಿಂದೆಂದೂ ಯಾವ ತಂಡವು ಮಾಡಿರದ ಮೈಲಿಗಲ್ಲನ್ನು ನಿರ್ಮಿಸಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಜ್ಜಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಈ ಸಾಧನೆ ಮಾಡಲು ಹಾತೊರೆಯುತ್ತಿದೆ.

ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಗೆಲುವಿನ ನೆಚ್ಚಿನ ತಂಡವೆನಿಸಿದೆ. ಹಾಗೊಂದು ವೇಳೆ ಗೆದ್ದರೆ, ತವರು ನೆಲದಲ್ಲಿ ಸತತ 11ನೇ ಟೆಸ್ಟ್ ಸರಣಿ ಗೆದ್ದ ವಿಶ್ವದ ಏಕಮಾತ್ರ ತಂಡವೆಂಬ ಹಿರಿಮೆಗೆ ಪಾತ್ರವಾಗಲಿದೆ.

ಸದ್ಯ ಆಸ್ಟ್ರೇಲಿಯಾ ಜತೆಗೆ ಟೀಂ ಇಂಡಿಯಾ 10 ಸತತ ಹೋಮ್ ಟೆಸ್ಟ್ ಸಿರೀಸ್ ಗೆಲುವುಗಳ ದಾಖಲೆಯನ್ನು ಸರಿಗಟ್ಟಿದೆ. 1994 ನವೆಂಬರ್‌ನಿಂದ 2000ನೇ ಇಸವಿಯವರೆಗೆ ಮಾಜಿ ನಾಯಕರಾದ ಸ್ಟೀವ್ ವ್ಹಾ ಹಾಗೂ ಮಾರ್ಕ್ ಟೇಲರ್ ಮುಂದಾಳತ್ವದಲ್ಲಿ ಆಸೀಸ್ ದಾಖಲೆ ಬರೆದಿತ್ತು. ಹಾಗೆಯೇ ರಿಕಿ ಪಾಂಟಿಂಗ್ ನೇತೃತ್ವದಲ್ಲಿ 2004 ಜುಲೈನಿಂದ 2008 ನವೆಂಬರ್ ವರೆಗೂ ತವರು ನೆಲದಲ್ಲಿ ಸತತ ಗೆಲುವುಗಳನ್ನು ದಾಖಲಿಸಿತ್ತು.

ಭಾರತ 2012-13ನೇ ಸಾಲಿನಲ್ಲಿ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಮುಖಭಂಗ ಅನುಭವಿಸಿತ್ತು. ಅಲ್ಲಿಂದ ಬಳಿಕ ಹೋಮ್ ಲ್ಯಾಂಡ್‌ನಲ್ಲಿ ಸೋಲಿನ ಸರಣಿ ಸೋಲನ್ನು ಅನುಭವಿಸಿಲ್ಲ. ವೆಸ್ಟ್‌ಇಂಡೀಸ್ ವಿರುದ್ಧ ಗೆಲುವಿನ ಮೂಲಕ ಭಾರತ ತನ್ನ ಪಯಣವನ್ನು ಆರಂಭಿಸಿತ್ತು. ವಿಶೇಷವೆಂದರೆ ಇದು ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಕೊನೆಯ ಟೆಸ್ಟ್ ಸರಣಿಯಾಗಿತ್ತು.

ಅಲ್ಲಿಂದ ಬಳಿಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆತ ಕಂಡಿರುವ ಟೀಂ ಇಂಡಿಯಾ ಬಳಿಕ ಹಿಂತಿರುಗಿಯೇ ನೋಡಿಲ್ಲ. ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ನಿವೃತ್ತಿ ಘೋಷಿಸಿದ ಬಳಿಕ ಕಪ್ತಾನಗಿರಿ ವಹಿಸಿರುವ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.

ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಟೀಂ ಇಂಡಿಯಾ 120 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ದ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

ಅಂದ ಹಾಗೆ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿ ಗೆಲುವುಗಳನ್ನು ದಾಖಲಿಸಿದ ಪಟ್ಟಿಯಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಜತೆಗೆ ಭಾರತ ಜಂಟಿ ಅಗ್ರಸ್ಥಾನವನ್ನು ಹಂಚಿಕೊಂಡಿದೆ. ಭಾರತ 2015ರಿಂದ 2017-18ರ ಅವಧಿಯಲ್ಲಿ ಒಟ್ಟು ಒಂಬತ್ತು ಟೆಸ್ಟ್ ಸರಣಿಗಳಲ್ಲಿ ಗೆಲುವು ಬಾರಿಸಿತ್ತು. ಆಸೀಸ್ 2005/06 ರಿಂದ 2008 ಮತ್ತು ಇಂಗ್ಲೆಂಡ್ ತಂಡವು 1884ರಿಂದ 1891/92ರ ಅವಧಿಯಲ್ಲಿ ಸತತವಾಗಿ ಒಂಬತ್ತು ಸರಣಿ ಗೆಲುವುಗಳನ್ನು ದಾಖಲಿಸಿತ್ತು. (ಎಂ.ಎನ್)

Leave a Reply

comments

Related Articles

error: