ದೇಶಪ್ರಮುಖ ಸುದ್ದಿ

370ನೆ ವಿಧಿ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂನಿಂದ ನೋಟಿಸ್ ಜಾರಿ: ನ. 14ಕ್ಕೆ ವಿಚಾರಣೆ

ನವದೆಹಲಿ,ಅ.1-ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೆ ವಿಧಿ ರದ್ದು ಮಾಡಿರುವ ವಿಚಾರವಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿದೆ.

ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿ, ಜಮ್ಮು-ಕಾಶ್ಮಿರದ ವಿಶೇಷ ಸ್ಥಾನಮಾನ ರದ್ದತಿಯ ಬಗ್ಗೆ ಎದ್ದಿರುವ ಆಕ್ಷೇಪಗಳಿಗೆ ಇನ್ನು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್​ ನೀಡಿದೆ.

ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ವಿಧಿ 370 ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ವಿಚಾರಣೆಗಾಗಿ ಸಾಂವಿಧಾನಿಕ ಪೀಠಕ್ಕೆ ರವಾನೆ ಮಾಡಿತ್ತು. ಅದರಂತೆ ಇಂದು ಈ ಅರ್ಜಿಗಳ ವಿಚಾರಣೆ ಆರಂಭಿಸಿದ ಸಾಂವಿಧಾನಿಕ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್​ ನೀಡಿದೆ.

ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್​ 5ರಂದು ರದ್ದುಗೊಳಿಸಿತ್ತು. ಬಳಿಕ ಜಮ್ಮು-ಕಾಶ್ಮೀರ ಮತ್ತು ಲಡಾಕ್​ಗೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ರಾಜ್ಯಸಭಾ ಸದಸ್ಯ ವೈಕೋ ಸೇರಿದಂತೆ ಹಲವರು ಸುಪ್ರೀಂಕೋರ್ಟ್ ​ಗೆ ಅರ್ಜಿ ಸಲ್ಲಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: