ಮೈಸೂರು

ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ಪತ್ನಿ ಆರೋಪ

ಹೆಚ್ಚಿನ ಹಣ ತರುವಂತೆ ಒತ್ತಾಯಿಸಿ ತನ್ನ ಪತಿ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ನಗರದ ಕ್ಯಾತಮಾರನಹಳ್ಳಿ ಅಶ್ವತ್ಥ ಕಟ್ಟೆ ರಸ್ತೆಯ ನಿವಾಸಿ ಕೆ.ಇಂದಿರಾ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ವರ್ಷ 2016ರ ಏ.15ರಂದು ಮೀನುಗಾರಿಕೆ ಇಲಾಖೆಯಲ್ಲಿ ಎಸ್‍ಡಿಸಿ ಹುದ್ದೆಯಲ್ಲಿರುವ ಗೋಪಾಲಕೃಷ್ಣಸ್ವಾಮಿ ಅವರ ಜತೆ ನನ್ನ ಮದುವೆ ಆಗಿತ್ತು. ವಿವಾಹದ ಸಮಯದಲ್ಲಿ ಗೋಪಾಲಕೃಷ್ಣಸ್ವಾಮಿ ಅವರಿಗೆ ಒಂದು ಲಕ್ಷ ರೂ., 150 ಗ್ರಾಂ ಚಿನ್ನ ಮತ್ತು 18,000 ರೂ. ವಾಚು ಮತ್ತು ಬಟ್ಟೆಯನ್ನು ಕೊಡಲಾಗಿತ್ತು.

ಗೋಪಾಲಕೃಷ್ಣಸ್ವಾಮಿ ಮತ್ತು ಆತನ ಸಂಬಂಧಿಕರು ನನಗೆ ನನ್ನ ತವರು ಮನೆಯಿಂದ 4 ಲಕ್ಷ ರೂ. ತರುವಂತೆ ಒತ್ತಾಯಿಸಿ ನಿರಂತರವಾಗಿ ಬೈದು ಹೊಡೆದು ಮಾಡುವುದರ ಜೊತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಕೆ.ಇಂದಿರಾ ಆರೋಪಿಸಿದರು.

ನಾನು ಏಳೂವರೆ ತಿಂಗಳು ಗರ್ಭಿಣಿಯಾಗಿದ್ದಾಗ, ನನ್ನನ್ನು ವೈದ್ಯರ ಬಳಿ ಚೆಕಪ್ ಗೆ ಕರೆದುಕೊಂಡು ಬಂದು ನನ್ನ ತವರು ಮನೆಗೆ ಬಿಟ್ಟುಹೋದರು. ನಂತರ ಇದ್ದಕ್ಕಿದ್ದಂತೆ 2016ರ ಅಕ್ಟೋಬರ್ 30ರಂದು ಆರೋಪಿಗಳಾದ ಗೋಪಾಲಸ್ವಾಮಿ, ಜಯಮ್ಮ, ನಾಗಮಣಿ, ಶೀಲಾ ಮತ್ತು ಶ್ರೀಧರ್ ಚಾಮುಂಡಿಬೆಟ್ಟ ಎನ್ನುವವರು ನನ್ನ ತವರು ಮನೆಗೆ ಬಂದು ನಾವು ಕೇಳಿದ ನಾಲ್ಕು ಲಕ್ಷ ರೂ.ಕೊಡಬೇಕು. ನಿನ್ನ ಗಂಡ ತುಂಬಾ ಸಾಲ ಮಾಡಿಕೊಂಡಿದ್ದಾನೆ. ನೀನು ನಿನ್ನ ಮನೆಯವರು ನಾವು ಕೇಳಿದ ಹಣ ಕೊಡಲಿಕ್ಕೆ ಆಗದಿದ್ದರೆ, ಗೋಪಾಲಸ್ವಾಮಿಗೆ ಬೇರೆ ಮದುವೆ ಮಾಡುತ್ತೇವೆ. ನೀನು ಡೈವೋರ್ಸ್ ಕೊಡು. ಹಾಗೂ ನಿನ್ನ ಜೀವ ಉಳಿಸಿಕೋ ಎಂದು ಕೊಲೆ ಬೆದರಿಕೆ ಹಾಕಿದರಲ್ಲದೇ ನಾನು ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೇ ನನ್ನ ಮೇಲೆ ಹಲ್ಲೆ ಮಾಡಿ ಹೋಗಿದ್ದಾರೆ ಎಂದು ಇಂದಿರಾ ದೂರಿದರು.

ಈ ಸಂಬಂಧ ನಾವು (ಕೆ.ಇಂದಿರಾ ಹಾಗೂ ತಾಯಿ ಮನೆಯವರು) ಆರೋಪಿಗಳಾದ ಗೋಪಾಲಸ್ವಾಮಿ, ಜಯಮ್ಮ, ನಾಗಮಣಿ, ಶೀಲಾ ಮತ್ತು ಶ್ರೀಧರ್ ಚಾಮುಂಡಿಬೆಟ್ಟ ಅವರ ವಿರುದ್ಧ ದೇವರಾಜ ಉಪವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಇದೀಗ  ಅವರೆಲ್ಲರೂ ಜಾಮೀನಿನ ಮೇಲೆ ಇದ್ದಾರೆ. ನನಗೆ ಈಗ ಹೆರಿಗೆ ಆಗಿದ್ದು, ಗಂಡನಿಂದ ರಕ್ಷಣೆ ಬೇಕಾಗಿದೆ. ನಾನು ನನ್ನ ಗಂಡನ ಜತೆ ಬಾಳಲು ಇಷ್ಟಪಡುತ್ತೇನೆ. ನಾವು ಬಡವರಾಗಿರುವುದರಿಂದ ಅವರು ಕೇಳಿದಷ್ಟು ಹಣವನ್ನು ನಮ್ಮ ತವರು ಮನೆಯಿಂದ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಲವತ್ತುಕೊಂಡರು.

ಗೋಪಾಲಸ್ವಾಮಿಯನ್ನು ಠಾಣೆಗೆ ಕರೆಯಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ನಾನು ಸಾಕಷ್ಟು ಬಾರಿ ಸಂಬಂಧಪಟ್ಟ ಠಾಣಾಧಿಕಾರಿಗೆ ಕೋರಿಕೊಂಡಿದ್ದೇನೆ. ಹಾಗಿದ್ದರೂ ಇಲ್ಲಿಯವರೆಗೂ ನನಗೆ ಸೂಕ್ತ ನ್ಯಾಯ ದೊರಕಿಲ್ಲ. ನನ್ನ ಗಂಡ ಒಬ್ಬ ಸರಕಾರಿ ನೌಕರರಾಗಿದ್ದಾರೆ. ನನಗೆ ಆಗುತ್ತಿರುವ ಈ ರೀತಿಯ ಅನ್ಯಾಯ ಮತ್ಯಾರಿಗೂ ಆಗುವುದು ಬೇಡ ಎಂದು ಕೆ.ಇಂದಿರಾ ಕೇಳಿಕೊಂಡರು.

ಇಂದಿರಾ ಅವರ ತಾಯಿ ಕೆಂಪಮ್ಮ ಗೋಷ್ಠಿಯಲ್ಲಿ ಇದ್ದರು.

 

 

Leave a Reply

comments

Related Articles

error: