ಮೈಸೂರು

ಅರಮನೆ ಆವರಣದಲ್ಲಿ ಕಲಾರಸಿಕರನ್ನು ಹೊಸಲೋಕಕ್ಕೆ ಕರೆದೊಯ್ದ ಸಂಗೀತ, ನೃತ್ಯ, ವಯೋಲಿನ್‌ ನಾದ

ಮೈಸೂರು,ಅ.2:-  ದಸರಾ ಪ್ರಯುಕ್ತ ಅಂಬಾವಿಲಾಸ ಅರಮನೆ ಆವರಣದಲ್ಲಿ ಮಂಗಳವಾರ ದಸರಾ ಸಾಂಸ್ಕೃತಿಕ ಉಪಸಮಿತಿ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ, ವಯೋಲಿನ್‌ ನಾದ ಕಲಾರಸಿಕರನ್ನು ಹೊಸಲೋಕಕ್ಕೆ ಕರೆದೊಯ್ದಿತ್ತು.

ಹಿಂದೂಸ್ತಾನಿ ಸಂಗೀತ, ಕಥಕ್‌ ನೃತ್ಯರೂಪಕ, ನವದುರ್ಗಾ ನೃತ್ಯದ ಜೊತೆಗೆ ದ್ವಂದ್ವ ವಯೋಲಿನ್‌ ನಾದಕ್ಕೆ ಸಾಂಸ್ಕೃತಿಕ ನಗರಿಯ ಕಲಾಸಕ್ತರು ತಲೆದೂಗಿದರು.

ಬೆಂಗಳೂರಿನ ಎಲಿಮೆಂಟ್‌ ಆಫ್‌ ಆರ್ಟ್ಸ್ ಅಂಡ್‌ ಹೆರಿಟೇಜ್‌ ಅಕಾಡೆಮಿಯ ರೂಪಾ ರವೀಂದ್ರನ್‌ ತಂಡದವರು ಪ್ರಸ್ತುತ ಪಡಿಸಿದ ನವದುರ್ಗಾ ನೃತ್ಯವು ವಿಶೇಷವಾಗಿತ್ತು. ದುರ್ಗೆಯ ಒಂಭತ್ತು ಅವತಾರಗಳನ್ನು, ನವರಸಗಳನ್ನು ಉಣಬಡಿಸಿದರು.

ಅಂತಾರಾಷ್ಟ್ರೀಯ ಖ್ಯಾತಿಯ ವಯೋಲಿನ್‌ ವಾದಕರಾದ ವಿದ್ವಾನ್‌ ಮೈಸೂರು ಮಂಜುನಾಥ್‌ ಮತ್ತು ವಿದ್ವಾನ್‌ ಮೈಸೂರು ನಾಗರಾಜ್‌ ಸಹೋದರರು ಪ್ರಸ್ತುತಪಡಿಸಿದ ವಯೋಲಿನ್‌ ಜುಗಲ್‌ಬಂದಿ ನಾದಕ್ಕೆ ಪ್ರೇಕ್ಷಕರು ತಲೆದೂಗಿದರು. ಅರಮನೆ ಆವರಣದಲ್ಲೆಲ್ಲ ವಯೋಲಿನ್‌ ನಾದವೇ ಆವರಿಸುವ ಮೂಲಕ ನಾದಲೋಕವೊಂದು ಸೃಷ್ಟಿಯಾಯಿತು.

ಬೆಂಗಳೂರಿನ ಹರಿಚೇತನ ತಂಡದವರು ಕಥಕ್‌ ನೃತ್ಯವನ್ನು ಸೊಗಸಾಗಿ ಪ್ರದರ್ಶಿಸಿದರು. ಮಳೆಯ ನಡುವೆಯೂ ವೈಷ್ಣವಿ ಗಂಗೂಬಾಯಿ ಹಾನಗಲ್‌ ಅವರು ಹಿಂದೂಸ್ತಾನಿ ಸಂಗೀತವನ್ನು ಸುಮಧುರವಾಗಿ ಹಾಡುವ ಮೂಲಕ ಕೇಳುಗರ ಮನಗೆದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: