ಮೈಸೂರು

ಸುತ್ತೂರು ಜೆಎಸ್‍ಎಸ್‍ ಶಿಕ್ಷಣ ಸಂಸ್ಥೆಯಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ದಿನಾಚರಣೆ

ಮೈಸೂರು,ಅ.2:- ಸುತ್ತೂರು ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಹಾಗೂ ವಿಶ್ವ ಹಿರಿಯರ ದಿನಾಚರಣೆಯನ್ನು ಇಂದು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೇಲುಕೋಟೆಯ ಸಾಮಾಜಿಕ ಕಾರ್ಯಕರ್ತರಾದ ಸಂತೋಷ್ ಕೌಲಗಿಯವರು ಮಾತನಾಡಿ ಗಾಂಧೀಜಿಯವರ ಅಂತರಂಗ ಮತ್ತು ಬಹಿರಂಗ ಎರಡರಲ್ಲಿಯೂ ಯಾವುದೇ ವ್ಯತ್ಯಾಸವಿರಲಿಲ್ಲ. ಅವರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಆದ್ದರಿಂದಲೇ ಅವರು ಮಹಾತ್ಮರೆನಿಸಿಕೊಂಡರು ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ನಂಜನಗೂಡು ತಾಲೂಕಿನ ಗೆಜ್ಜಗನಹಳ್ಳಿಯ ಶ್ರೀ ಗ್ಲೂಕೊ ಬಯೋಟೆಕ್ ಪ್ರೈ.ಲಿನ ಸೈಟ್ ಮ್ಯಾನೇಜರ್‍  ವಿ. ಗೋವಿಂದರಾಜುಲು , ಲಾಲ್‍ಬಹದ್ದೂರ್‍ಶಾಸ್ತ್ರೀಜಿಯವರ ಪ್ರಾಮಾಣಿಕತೆ ಮತ್ತು ಸರಳ ಜೀವನ ಪ್ರತಿಯೊಬ್ಬ ಭಾರತೀಯನಿಗೂ ಆದರ್ಶವಾಗಬೇಕು. ವಿದ್ಯಾರ್ಥಿಗಳು ಇಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ನಂ. ತಪಸ್ವೀ ಕುಮಾರ್, ಹಿರಿಯರ ಅನುಭವ ಕಿರಿಯರಿಗೆ ಮಾಗದರ್ಶನವಾಗಬೇಕು. ಅಂತೆಯೇ ಕಿರಿಯರು ಹಿರಿಯರನ್ನು ಗೌರವಿಸಬೇಕು ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಪ್ರಯುಕ್ತ ಇಬ್ಬರು ವಿದ್ಯಾರ್ಥಿಗಳು ಗಾಂಧಿ ವೇಷಧಾರಿಗಳಾಗಿ ಸಮಾರಂಭದಲ್ಲಿ ಗಮನ ಸೆಳೆದರು.

ವೇದಿಕೆಯಲ್ಲಿ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಅರುಣ್ ಬಳಮಟ್ಟಿ, ಸಂಸ್ಥೆಯ ಮುಖ್ಯಸ್ಥರುಗಳಾದ ಜಿ.ಎಲ್. ತ್ರಿಪುರಾಂತಕ, ಸಂಪತ್ತು, ವೀರಭದ್ರಯ್ಯ, ಡಾ.ಎಂ.ಸಿ.ನಟರಾಜ, ಕೆ.ವಿ. ರಾವ್ ,ಜಿ.ಶಿವಮಲ್ಲು, ಬಿ.ಎಂ. ಸಿದ್ದಪ್ಪ, ಸಿ.ಪಿ.ನಿರ್ಮಲ ಹಾಗೂ ಜಿ.ಎಂ.ಷಡಕ್ಷರಿ, ಮಹದೇವಪ್ರಸಾದ್ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಜೆ.ಜಿ. ರಾಜಣ್ಣ ಸ್ವಾಗತಿಸಿದರು. ಡಾ. ಸತೀಶ್ ಎಂ.ಸಿ ವಂದಿಸಿದರು. ಗಂಗಪ್ಪ ಹಿಪ್ಪರಗಿ ನಿರೂಪಿಸಿದರು. (ಎಸ್.ಎಚ್)

Leave a Reply

comments

Related Articles

error: