ಪ್ರಮುಖ ಸುದ್ದಿ

ಮಕ್ಕಳ ದಸರಾ ಸಂಭ್ರಮದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು : ಗಮನ ಸೆಳೆದ ಮಕ್ಕಳ ಸಂತೆ, ಮಕ್ಕಳ ಮಂಟಪ

ರಾಜ್ಯ( ಮಡಿಕೇರಿ) ಅ.3 :-ಎಡೆಬಿಡದೆ ಸುರಿಯುತ್ತಿದ್ದ ಮಳೆ, ರಜಾ ದಿನಗಳನ್ನು ಸರಿಹೊಂದಲು ನಡೆಯುತ್ತಿದ್ದ ಒತ್ತಡದ ಓದು, ಬರಹದಿಂದ ಕೊಂಚ ಮುಕ್ತರಾದಂತೆ ಕಂಡ ವಿದ್ಯಾರ್ಥಿ ಸಮೂಹ ಇಂದು ನಡೆದ ಮಕ್ಕಳ ದಸರಾ ಸಂಭ್ರಮದಲ್ಲಿ ಮಿಂದೆದ್ದರು.
ಮಡಿಕೇರಿ ದಸರಾ ಜನೋತ್ಸವಕ್ಕೆ ಮೆರಗು ನೀಡಿದ “ಮಕ್ಕಳ ದಸರಾ ಉತ್ಸವ” ಬಾಲಪ್ರತಿಭೆಗಳ ಪ್ರತಿಭಾ ಅನಾವರಣಕ್ಕೆ ಸೂಕ್ತ ವೇದಿಕೆಯಾಯಿತು.
ಅತ್ಯಂತ ಕುತೂಹಲ ಮತ್ತು ಆಸಕ್ತಿಯಿಂದ ತರಕಾರಿ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನಿರಿಸಿಕೊಂಡು ನಡೆಸುತ್ತಿದ್ದ ವ್ಯಾಪಾರ ‘ಮಕ್ಕಳ ಸಂತೆ’ಯ ಕುತೂಹಲವನ್ನು ಹೆಚ್ಚಿಸಿತು. ಯಾವುದುಂಟು ಯಾವುದಿಲ್ಲ ಎನ್ನುವಂತೆಯೇ ಇಲ್ಲ, ವಿವಿಧ ತರಕಾರಿಗಳನ್ನು ಮಾರಾಟ ಮಾಡುವಾಗಿನ ಮಕ್ಕಳ ಕೌಶಲ್ಯ ನೋಡುವಂತದ್ದಾಗಿತ್ತಾದರೆ, ಗ್ರಾಹಕರನ್ನು ಸೆಳೆಯುವ ಮಕ್ಕಳ ಉತ್ಸಾಹಕ್ಕೆ ಹಿರಿಯರು ಬೆರಗಾದರು.
ಒಂದೆಡೆ ಮಕ್ಕಳ ಸಂತೆ ನಡೆದರೆ, ಮತ್ತೊಂದೆಡೆ ವಿಜ್ಞಾನ ಮಾದರಿಗಳ ಸ್ಪರ್ಧೆಯಲ್ಲಿ ಆರೋಗ್ಯ, ಸ್ವಚ್ಛತೆಗೆ ಆದ್ಯತೆ ನೀಡಿದ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ಜೇಡಿ ಮಣ್ಣಿನ ಕಲಾಕೃತಿ ರಚನೆಯ ಸ್ಪಧೆರ್ಯಲ್ಲಿನ ಮಕ್ಕಳ ಕಲಾಪ್ರತಿಭೆ, ಉತ್ಸಾಹ ಎದ್ದು ಕಾಣುತ್ತಿತ್ತು. ದೊಡ್ಡವರ ದಸರಾ ದಶಮಂಟಪ ಶೋಭಾಯಾತ್ರೆಗೆ ಸರಿಸಾಟಿಯಾಗುವಂತೆ ‘ಮಕ್ಕಳ ಮಂಟಪ’ಗಳು ಆಕರ್ಷಕವಾಗಿದ್ದವು.
ಪುಟಾಣಿಗಳ ಛದ್ಮವೇಷ ಸ್ಪರ್ಧೆ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮಹಾತ್ಮಾ ಗಾಂಧೀಜಿ, ಬಾಲ ಗೋಪಾಲ, ಸ್ವಾಮಿ ವಿವೇಕಾನಂದ, ಸುರರು, ಅಸುರರು, ಒಂದೇ ಎರಡೇ ವಿವಿಧ ವೇಷಾಧಾರಿ ಮುದ್ದು ಮೊಗದ ಪುಟಾಣಿಗಳು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಶಾಸಕರ ಮೆಚ್ಚುಗೆ
ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಹಾತ್ಮಾ ಗಾಂಧೀಜಿಯ ಭಾವಚಿತ್ರಕ್ಕೆ ಪುಟಾಣಿಗಳೊಂದಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಕ್ಕಳ ದಸರಾ ಉದ್ಘಾಟಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಬಾಲಪ್ರತಿಭೆಗಳನ್ನು ಕೊಂಡಾಡಿದರು. ಮಕ್ಕಳ ಪ್ರತಿಭಾ ಅನಾವರಣಕ್ಕೆ ಪೂರಕವಾದ ಕಾರ್ಯಕ್ರಮ ಇದಾಗಿದ್ದು, ಮಹಾತ್ಮಾ ಗಾಂಧೀಜಿಯವರ ಜಯಂತಿಯ ಸಂದರ್ಭವೇ ಮಕ್ಕಳ ದಸರಾ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾತ್ಮರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕೆಂದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮಡಿಕೇರಿ ದಸರಾ ಕೇವಲ ಉತ್ಸವವಲ್ಲ, ಇದೊಂದು ಜನೋತ್ಸವವಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಎಡಿಸಿ ಸ್ನೇಹ, ಎಸ್‍ಪಿ ಡಾ. ಸುಮನ್ ಡಿ. ಪನ್ನೇಕರ್, ಸಿಇಒ ಲಕ್ಷ್ಮೀ ಪ್ರಿಯ, ದಸರಾ ಸಮಿತಿ ಗೌರವ ಕಾರ್ಯದರ್ಶಿ ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್, ರೋಟರಿ ಜೋನಲ್ ಅಸಿಸ್ಟೆಂಟ್ ಗವರ್ನರ್ ನಾಗೇಶ್ ಪಿ., ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳ ದಸರಾ ಸಮಿತಿ ಸಂಚಾಲಕ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: