ಪ್ರಮುಖ ಸುದ್ದಿಮನರಂಜನೆಮೈಸೂರು

ಗಾಯಕಿ ಸಂಗೀತ ರವೀಂದ್ರನಾಥ್ ಹಾಗೂ‌ ಮೋಹಿತ್ ಚೌಹಾಣ್ ಅವರ ಗಾಯನಕ್ಕೆ ಹುಚ್ಚೆದ್ದು ಕುಣಿದ ‌ಯುವ ಸಮೂಹ

ಮೈಸೂರು,ಅ.3:- ದಸರಾ ಸಂಭ್ರಮದ ಯುವ ವೇದಿಕೆ ಎಂದೇ ಪ್ರಸಿದ್ದವಾದ ಯುವ ದಸರಾ ಸಂಭ್ರಮದ ಎರಡನೇ ದಿನ ಹಲವು ವಿಭಿನ್ನ ರೀತಿಯ ಕಾರ್ಯಕ್ರಮಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿತು.

ಮೈಸೂರಿನ ಹಿನ್ನೆಲೆ ಗಾಯಕಿ ಸಂಗೀತ ರವೀಂದ್ರನಾಥ್ ಅವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ತಮ್ಮ ಸುಮಧುರ ಕಂಠದಿಂದ ‘ತೂಗು ಮಂಚದಲ್ಲಿ ತೂಗಿ’, ‘ಬಸಣ್ಣಿ ಬಾ’, ‘ಜೋಕೆ ನಾನು‌ ಬಳ್ಳಿಯ ಮಿಂಚು’, ‘ಯಾಕ್ಲ ಹುಡುಗ ಮೈಯ್ಯಾಗ ಹೆಂಗೈತಿ’, ‘ಸುತ್ತ ಮುತ್ತಲೂ ಸಂಜೆಗತ್ತಲೂ’, ‘ಅಲ್ಲಾಡ್ಸ ಅಲ್ಲಾಡ್ಸ, ‘ಮಸ್ತು ಮಸ್ತು ಹುಡ್ಗಿ ಬಂದ್ಲು’ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಖ್ಯಾತ ಬಾಲಿವುಡ್ ಗಾಯಕರಾದ ಮೋಹಿತ್ ಚೌಹಾಣ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ‌ ಹಾಡಿದ ಹಿಂದಿ‌ ಹಾಡುಗಳಿಗೆ ಇಡೀ ಮೈದಾನ ಕುಣಿದು ಕುಪ್ಪಳಿಸಿ ಯುವ ದಸರಾಗೆ ಮನಸೋತರು.

ರಷ್ಯನ್  ಆ್ಯಕ್ಟ್, ಕ್ವಿಕ್ ಏಂಜಲ್ಸ್ ಅವರಿಂದ ಮ್ಯಾಜಿಕ್ ಡ್ರೆಸ್ ಡ್ಯಾನ್ಸ್ ಗೆ ಮೈಸೂರಿಗರು ನಿಬ್ಬೆರಗಾಗಿ ವೀಕ್ಷಿಸಿದರು.  ಬ್ಯಾಡ್ ಸಾಲ್ಸಾ, ಬಾಂಬೆ ತಂಡದಿಂದ ಮನಮೋಹಕ ನೃತ್ಯ ಮುಖಾಂತರ ಮನಸೂರೆಗೊಳಿಸಿದರು.

ಅನಿಲ್ ಡ್ಯಾನ್ಸ್ ಅಕಾಡೆಮಿ ಹಾಗೂ ಸ್ಟಾರ್ 3 ಎಂ.ಪಿ.ಎಲ್ ತಂಡದಿಂದ ನೃತ್ಯ ಪ್ರದರ್ಶನ, ಮೈಸೂರು ಮಿಂಚು ಸಿ.ಕೆ. ಸರ್ವೇಶ್ವರ ನೃತ್ಯ ಕಲಾ ಮಂದಿರ ತಂಡದಿಂದ ನೃತ್ಯ ರೂಪಕ, ಮೈಸೂರು ಡಿವೈನ್ ಡ್ಯಾನ್ಸರ್ಸ್ ಅಕಾಡೆಮಿ ಹಾಗೂ ಹಾಟ್ ಸ್ಪಾಟ್ ತಂಡದಿಂದ ನೃತ್ಯ ಪ್ರದರ್ಶನಕ್ಕೆ ಶಿಳ್ಳೆ  ಚಪ್ಪಾಳೆ ‌ಮೂಲಕ‌ ಯುವಕರು ಕುಣಿದು ಕುಪ್ಪಳಿಸಿದರು.

ಯುವ ಸಂಭ್ರಮದಿಂದ ಆಯ್ಕೆಯಾದ ಅತ್ಯುತ್ತಮ ತಂಡಗಳಾದ ಪಿ.ಇ.ಎಸ್. ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು, ಮೈಸೂರು ಜಿ.ಎಸ್.ಎಸ್‍ಎಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಫಾರ್ ವುಮೆನ್,  ಮೈಸೂರಿನ ಎಸ್.ಬಿ.ಆರ್, ಆರ್, ಮಹಾಜನ ಪ್ರಥಮ ದರ್ಜೆ  ಕಾಲೇಜು ಹಾಗೂ ಪಿರಿಯಾಪಟ್ಟಣದ ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು  ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದಸರಾ ಉಪ ವಿಶೇಷಾಧಿಕಾರಿ ರಿಷ್ಯಂತ್, ಯುವ ದಸರಾ ಉಪಸಮಿತಿ ಅಧ್ಯಕ್ಷ ಗೋಕುಲ್ ಗೋವರ್ಧನ್, ಕಾರ್ಯಾಧ್ಯಕ್ಷ ಲಿಂಗಣ್ಣಯ್ಯ, ಕಾರ್ಯದರ್ಶಿ ಸೋಮಶೇಖರ್, ಅರ್ಪಿತಾ ಸಿಂಹ ಹಾಗೂ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: