ಪ್ರಮುಖ ಸುದ್ದಿಮೈಸೂರು

ಆನೆ ಮಾವುತರ ವೇತನ ಕುರಿತ ಸಮಸ್ಯೆ ಬಗೆಹರಿಸುವುದಾಗಿ ಸಚಿವ ಸಿ.ಸಿ. ಪಾಟೀಲ್‌ ಭರವಸೆ

ಮೈಸೂರು,ಅ.3:-  ಆನೆ ಮಾವುತರ ವೇತನ ಕುರಿತ ಸಮಸ್ಯೆ ಬಗೆಹರಿಸುವುದಾಗಿ ಸಚಿವ ಸಿ.ಸಿ. ಪಾಟೀಲ್‌ ಭರವಸೆ ನೀಡಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಅರಮನೆ ಆವರಣದ ಆನೆ ಶಿಬಿರಕ್ಕೆ ಖುದ್ದು  ಭೇಟಿ ನೀಡಿದ ಸಚಿವರು ನಿಮ್ಮ ಮನವಿ ಸರಕಾರಕ್ಕೆ ತಲುಪಿದೆ. ಸದ್ಯದಲ್ಲಿಯೇ ಈ ಮನವಿಯನ್ನು ಪರಿಗಣಿಸಿ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಅಷ್ಟೇ ಅಲ್ಲದೆ, ಯಾವುದೇ ಕಾರಣಕ್ಕೂ ದಸರಾ ಕಾರ್ಯವನ್ನು ಸ್ಥಗಿತಗೊಳಿಸದಂತೆ ಮಾವುತರು ಹಾಗೂ ಕಾವಾಡಿಗಳಿಗೆ ಸೂಚನೆ ನೀಡಿದರು. ಪ್ರತಿ ವರ್ಷ ಜಂಬೂ ಸವಾರಿ ಸುಸೂತ್ರವಾಗಿ ನಡೆಸುವಲ್ಲಿ ಆನೆ ಮಾವುತರು, ಕಾವಾಡಿಗಳು ಮುಖ್ಯ ಪಾತ್ರವಹಿಸುತ್ತಾರೆ. ಈ ಕೆಲಸ ಹೀಗೆ ಮುಂದುವರಿಸಿ ದಸರಾ ಮಹೋತ್ಸವಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

ದಸರಾ ಆನೆಗಳ ಮಾವುತ ಮತ್ತು ಕಾವಾಡಿಗರು ಪೊಲೀಸರಿಗೆ ವೇತನ ಹೆಚ್ಚಳ ಮಾಡಿದ ರೀತಿಯಲ್ಲಿ ನಮಗೂ ವೇತನ ಪರಿಷ್ಕರಣೆ ಮಾಡಬೇಕು. ಇಲ್ಲವಾದಲ್ಲಿ ಆನೆಗಳ ತಾಲೀಮು ನಿಲ್ಲಿಸುತ್ತೇವೆ ಎಂದು ಈಗಾಗಲೇ ಹಿರಿಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.  ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಸಿ.ಸಿ.ಪಾಟೀಲ್‌ ಅವರು ಖುದ್ದು ಅರಮನೆ ಆವರಣದ ಆನೆ ಶಿಬಿರಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು.

ಸಚಿವರ ಭರವಸೆಯನ್ನು ಆಲಿಸಿದ ಮಾವುತರು, ಕಾವಾಡಿಗಳು, ನಾವು ಈಗ ದಸರಾ ಕಾರ್ಯಗಳನ್ನು ನಡೆಸಿಕೊಡುತ್ತೇವೆ. ಆದರೆ ಕೂಡಲೇ ವೇತನ ಪರಿಷ್ಕರಣೆ ಮಾಡದಿದ್ದರೆ ನಂತರದ ದಿನಗಳಲ್ಲಿಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಡಿಸಿಎಫ್‌ಗಳಾದ ಅಲೆಕ್ಸಾಂಡರ್‌, ಪ್ರಶಾಂತ್‌ ಕುಮಾರ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: