ಮೈಸೂರು

ಕುಕ್ಕರಹಳ್ಳಿ ಕೆರೆ ಹೂಳೆತ್ತುವುದು ಕೆರೆಗೆ ಮಾರಕ : ವಿ.ಎನ್.ರವಿಕುಮಾರ್

ಕುಕ್ಕರಹಳ್ಳಿ ಕೆರೆಯು ಹಲವು ವಲಸೆ ಹಕ್ಕಿಗಳ ಆಶ್ರಯ ತಾಣವಾಗಿದ್ದು, ಮಳೆ ಇಲ್ಲದೇ ಅದರ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಇಂತಹ ಬರಗಾಲದ ಸಂದರ್ಭದಲ್ಲಿ ಕೆರೆಯ ಹೂಳೆತ್ತುವ ಕಾರ್ಯ ಮಾಡುವುದು ನಿಜಕ್ಕೂ ಆತಂಕಕಾರಿ ವಿಷಯ ಎಂದು ಕುಕ್ಕರಹಳ್ಳಿ ಉಳಿಸಿ ಸಮಿತಿಯ ನೀರಿನ ತಜ್ಞ ವಿ.ಎನ್.ರವಿಕುಮಾರ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಿದ್ದು, ನೀರಿಲ್ಲದ  ಹಾಹಾಕಾರ ಪರಿಸ್ಥಿತಿ ಬಂದೊದಗಿದೆ. ಇದು ಹೂಳೆತ್ತುವ ಸಂದರ್ಭ ಅಲ್ಲ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ದಿಯ ಕಾರ್ಯಗಳು ಕೆರೆಯ ಪರಿಸರಕ್ಕೆ ಧಕ್ಕೆ ತರುತ್ತವೆ. ಪಾರ್ಕ್ ‍ಗಳ ನಿರ್ಮಾಣ, ಬೋಟಿಂಗ್ ಸೌಲಭ್ಯಗಳು ಪ್ರವಾಸಿಗರಿಗೆ ಹರ್ಷವನ್ನು ನೀಡಿದರೂ, ಕೆರೆಯ ನೈಜ ಸೌಂದರ್ಯ ಹಾಳಾಗುತ್ತದೆ ಎಂದರು.

ಕೆರೆಯಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಈಗಾಗಲೇ ರೂಪಿತವಾಗಿರುವ ನೀಲನಕ್ಷೆಗೆ ಬದ್ಧವಾಗಿ ನಡೆಯಲು ಹಾಗೂ ಪ್ರವಾಸಿ ಕೇಂದ್ರಿತ ಯೋಜನೆಗಳನ್ನು ಕೈಬಿಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಶಶಿ ಭೂಷಣ್ ಒಂಭತ್ಕೆರೆ, ಸಾಹುಕಾರ್, ಭಾನುಮೋಹನ್ ಮತ್ತು ತನುಜ ಹಾಜರಿದ್ದರು.

Leave a Reply

comments

Related Articles

error: