ಪ್ರಮುಖ ಸುದ್ದಿ

ಅಕ್ರಮ ಲಾಟರಿ ದಂಧೆ : ವಿರಾಜಪೇಟೆಯಲ್ಲಿ ನಾಲ್ವರ ಬಂಧನ

ರಾಜ್ಯ( ಮಡಿಕೇರಿ) ಅ.3 :-ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ಲಾಟರಿಯನ್ನು ಆಧಾರವಾಗಿಟ್ಟುಕೊಂಡು ಜೂಜಾಟದ ದಂಧೆ ನಡೆಸುತ್ತಿದ್ದ ಆರೋಪದಡಿ ನಾಲ್ವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಾಗಿದ್ದರೂ ಕಳೆದ ಕೆಲವು ತಿಂಗಳುಗಳಿಂದ ಪಟ್ಟಣದ ವಿವಿಧೆಡೆ ಕೇರಳ ರಾಜ್ಯದ ಲಾಟರಿ ಅಕ್ರಮವಾಗಿ ಮಾರಾಟವಾಗುತ್ತಿತ್ತು. ಸಾರ್ವಜನಿಕರ ದೂರನ್ನು ಆಧರಿಸಿ ಖಚಿತ ಮಾಹಿತಿಯನ್ವಯ ದಂಧೆ ನಡೆಯುತ್ತಿದ್ದ ಪ್ರದೇಶಗಳಿಗೆ ಏಕಕಾಲಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ತಕರಾಗಿರುವ ಕೆ.ಎಂ.ರಶೀದ್, ವಿನೋದ್, ಶಂಷುದ್ದೀನ್ ಹಾಗೂ ಎಂ.ಎಂ.ಮೊಯ್ದು ಬಂಧಿತ ಅರೋಪಿಗಳು. ಕೇರಳ ರಾಜ್ಯದ ಟಿಕೆಟ್‍ನ ಕೊನೆಯ ಮೂರು ಅಂಕಿಗಳ ಫಲಿತಾಂಶದ ಆಧಾರದ ಮೇಲೆ ಜೂಜಾಟ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 30,780 ರೂ. ನಗದು ವಶ ಪಡಿಸಿಕೊಂಡಿರುವ ಪೊಲೀಸರು ಪ್ರಮುಖ ಅರೋಪಿಯ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾರ್ಗದರ್ಶನದಲ್ಲಿ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಜಯಕುಮಾರ್, ವೃತ್ತ ನಿರೀಕ್ಷಕ ಕ್ಯಾತೇಗೌಡ ಅವರುಗಳ ನಿರ್ದೇಶನದ ಮೇರೆಗೆ ಠಾಣಾಧಿಕಾರಿ ಮರಿಸ್ವಾಮಿ, ಎಎಸ್‍ಐ ಮಾದಯ್ಯ, ಸೋಮಯ್ಯ, ಮತ್ತು ಸಿಬ್ಬಂದಿಗಳಾದ ಸುನೀಲ್, ಮೋಹನ್, ಲೋಕೇಶ್, ಗಿರೀಶ್, ಮುನೀರ್, ಈರಪ್ಪ, ರಂಜನ್ ಕುಮಾರ್ ಮತ್ತು ಚಾಲಕ ಯೋಗೇಶ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: