ಪ್ರಮುಖ ಸುದ್ದಿ

ಕೊಡಗು ಜಾನಪದ ಉತ್ಸವ : ಜಾನಪದ ಕಲೆಯನ್ನು ಪಠ್ಯದಲ್ಲಿ ಅಳವಡಿಸಿ : ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಸಲಹೆ

ರಾಜ್ಯ( ಮಡಿಕೇರಿ) ಅ.4 :-ಅತ್ಯಂತ ಶ್ರೀಮಂತ ಜಾನಪದ ಸಾಹಿತ್ಯ, ಕಲಾ ಸಂಸ್ಕೃತಿಯನ್ನು ಶಾಲಾ ಪಠ್ಯ ಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಹಾಗೂ ಮಡಿಕೇರಿ ನಗರ ದಸರಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ‘ಕೊಡಗು ಜಾನಪದ ಉತ್ಸವ’ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಿಮ್ಮೇಗೌಡ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಾನಪದ ಸಾಹಿತ್ಯ ಪಠ್ಯ ಕ್ರಮದಲ್ಲಿ ಅಳವಡಿಸುವುದು ಅವಶ್ಯವೆಂದು ಅಭಿಪ್ರಾಯಪಟ್ಟರು.
ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಇಡೀ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಯುವ ಸಮೂಹಕ್ಕೆ ಜಾನಪದ ಕಲಾ ಸಂಸ್ಕೃತಿಯತ್ತ ಒಲವು ಮೂಡಿಸುವ ಕಾರ್ಯಕ್ರಗಳು ನಡೆಯುತ್ತಿವೆ ಎಂದರು.
ಕೊಡಗಿನ ಸಂಸ್ಕೃತಿ, ಕಲೆ ವಿಶಿಷ್ಟವಾಗಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಸ್ಥಳೀಯ ಜಾನಪದ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತಿಮ್ಮೇಗೌಡ ಕರೆ ನೀಡಿದರು.
ರಾಗಿ ಬೀಸುವ ಮೂಲಕ ಮೂಲಕ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಯುವ ಸಮೂಹ ಟಿವಿ ಮತ್ತು ಸಾಮಾಜಿಕ ಜಾಲತಾಣದಿಂದ ದೂರ ಉಳಿದು ಹಿರಿಯರು ಪರಿಚಯಿಸಿದ ಜಾನಪದ ಕಲೆಗಳ ಬಗ್ಗೆ ಆಸಕ್ತಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಪ್ರಧಾನ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಪುತ್ತೂರಿನ ಖ್ಯಾತ ವಾಗ್ಮಿ ಕೃಷ್ಣ ಉಪಾಧ್ಯಾಯ, ಭಾರತದ ಧರ್ಮ, ಸಂಸ್ಕೃತಿಗಳು ಉಳಿಯಬೇಕಾದರೆ ‘ಜಾನಪದ’ದ ಉಳಿವು ಅಗತ್ಯವೆಂದರು. ಈ ದೇಶದ ಧರ್ಮ ಸಂಸ್ಕೃತಿಗಳ ತಿಳುವಳಿಕೆಗಳು ಜನಸಾಮಾನ್ಯರ ಅಂತರಾಳಕ್ಕೆ ಇಳಿದಿರುವುದು ಜಾನಪದದಿಂದ. ಜಾನಪದ ಹಾಡು ಮತ್ತು ಸಾಹಿತ್ಯದಲ್ಲಿ ಮೌಲ್ಯಗಳು ತುಂಬಿಕೊಂಡಿರುವುದಾಗಿ ತಿಳಿಸಿದರು.
ಸ್ಥಾನದಲ್ಲಿರುವ ಭೂಮಿಗೆ ಪ್ಲಾಸ್ಟಿಕ್‍ಗಳನ್ನು ಒಗೆದು ಕಲುಷಿತಗೊಳಿಸುವುದು ಜಾನಪದಕ್ಕೆ ಮಾಡುವ ಅವಮಾನವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಮಡಿಕೇರಿ ದಸರಾ ಜನೋತ್ಸವಕ್ಕೆ ಪರಿಪೂರ್ಣತೆಯನ್ನು ತಂದುಕೊಡುವಂತಹದ್ದೆ ಜಾನಪದ ಉತ್ಸವವಾಗಿದೆ. ಜಾನಪದವೆನ್ನುವುದು ಹಿರಿಯರು ತಮಗೆ ನೀಡಿರುವ ಅಮೂಲ್ಯ ಕೊಡುಗೆಯಾಗಿದ್ದು, ಯುವ ಸಮೂಹ ದೃಶ್ಯ ಮಾಧ್ಯಮಗಳಿಂದ ದೂರವಾಗಿ ಜಾನಪದ ಕಲಾ ಸಂಸ್ಕೃತಿಯತ್ತ ಆಸಕ್ತರಾಗಬೇಕೆಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್‍ನ ಕೊಡಗು ಘಟಕದ ಜಿಲ್ಲಾಧ್ಯಕ್ಷ ಅನಂತಶಯನ ಮಾತನಾಡಿ, ಜಾನಪದ ಎನ್ನುವುದು ಹೃದಯದ ಸಂವೇದನೆ. ಜಾನಪದೀಯವಾಗಿರುವ ಪ್ರತೀ ವಿಚಾರದಲ್ಲೂ ಒಂದೊಂದು ಸಂದೇಶ ಇರುತ್ತದೆ. ಕೊಡಗಿನಲ್ಲಿ ಶ್ರೀಮಂತ ಜಾನಪದ ಸಂಸ್ಕೃತಿ ಇದ್ದರೂ ಈ ಬಗ್ಗೆ ಜಾಗೃತಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸಾಧಕರಿಗೆ ಸನ್ಮಾನ
ಇದೇ ಸಂದರ್ಭ ಸಂಗೀತ ಕ್ಷೇತ್ರದ ಸಾಧಕ ಚೆಕ್ಕೇರ ತ್ಯಾಗರಾಜ್, ಕನ್ನಡ ಭಾಷಾ ಸಾಧಕ ಬಿ.ಎಸ್. ಲೋಕೇಶ್‍ಸಾಗರ್ ಹಾಗೂ ಸಾಹಿತ್ಯ ಸೇವೆಗಾಗಿ ಮನೆಮನೆ ಕವಿಗೋಷ್ಠಿ ಖ್ಯಾತಿಯ ವೈಲೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ. ತಿಮ್ಮೇಗೌಡ, ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಜಾನಪದ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿರುವ ಬಿ.ಜಿ. ಅನಂತಶಯನ ಹಾಗೂ ಪರಿಷತ್ತಿನ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಅನಿಲ್ ಎಚ್.ಟಿ. ಅವರನ್ನು ಸನ್ಮಾನಿಸಲಾಯಿತು.
ಜಾನಪದ ಪರಿಷತ್ತಿನ ‘ಸಿರಿ’ ಎನ್ನುವ ಪತ್ರಿಕೆಯನ್ನು ಗಣ್ಯರು ಇದೇ ಸಂದರ್ಭ ಅನಾವರಣಗೊಳಿಸಿದರು.
ವೇದಿಕೆಯಲ್ಲಿ ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ವೀರಾಜಪೇಟೆ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಸೋಮವಾರಪೇಟೆ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ, ಪ್ರಮುಖರಾದ ಸುಮಿ ಸುಬ್ಬಯ್ಯ, ಸುಜಲಾ ದೇವಿ, ಎಂ.ಬಿ. ಜೋಯಪ್ಪ, ಎಸ್.ಡಿ. ಪ್ರಶಾಂತ್ ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು. ಮಡಿಕೇರಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು, ಸಂಪತ್ ಕುಮಾರ್ ವಂದಿಸಿದರು.
ಜಾನಪದ ಉತ್ಸವದ ಹಿನ್ನೆಲೆಯಲ್ಲಿ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಜನಮನವನ್ನು ಸೂರೆಗೊಂಡಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: