ಪ್ರಮುಖ ಸುದ್ದಿಮೈಸೂರು

ಹಾಡಿನ ಮೂಲಕ ಕಲಾಪ್ರೇಕ್ಷಕರನ್ನು ಭಾವದ ಕಡಲಿನಲ್ಲಿ ತೇಲಿಸಿದ ಗಾಯಕ ವಿಜಯಪ್ರಕಾಶ್

ಮೈಸೂರು,ಅ.4:-  ಅಂಬಾವಿಲಾಸ ಅರಮನೆಯ ಬೆಳಕಿನ ವೈಭವದ ನಡುವೆ ನಿನ್ನೆ  ನಡೆದ ಅರಮನೆ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕ ವಿಜಯಪ್ರಕಾಶ್ ಕಲಾಪ್ರೇಕ್ಷಕರನ್ನು ಭಾವದ ಕಡಲಿನಲ್ಲಿ ತೇಲಿಸಿದರು.

ಭಾವಗೀತೆ, ಭಕ್ತಿಗೀತೆಗಳ ಮೂಲಕ ಹೊಸದಾದ ಲೋಕಕ್ಕೆ ಕರೆದೊಯ್ದರು.  ವಿಜಯ ಪ್ರಕಾಶ್ ಸಿನಿಮಾ ಹಾಡುಗಳನ್ನು ಹಾಡಿ ರಂಜಿಸುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಆಗಮಿಸಿದ್ದ ಸಾಕಷ್ಟು ಜನರು ನಿರಾಶೆ ಅನುಭವಿಸುವಂತಾಯಿತು.  ಕಳೆದ ಬಾರಿ ವಿಜಯಪ್ರಕಾಶ್ ಅರಮನೆ ವೇದಿಕೆಯಲ್ಲಿ ಸಿನಿಮಾ ಹಾಡುಗಳನ್ನು ಹಾಡಿ ರಂಜಿಸಿದ್ದರು. ಅಲ್ಲದೆ ಟಪಾಂಗುಚ್ಚಿ ಹಾಡುಗಳನ್ನು ಹಾಡಿ ರಂಜಿಸಲು ಮುಂದಾಗಿದ್ದ ಸಂದರ್ಭ ಕಾರ್ಯಕ್ರಮ ಆಯೋಜಕರು ಅರಮನೆ ವೇದಿಕೆಯಲ್ಲಿ ಟಪಾಂಗುಚ್ಚಿ ಹಾಡುಗಳನ್ನು ಹಾಡದಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಬಾರಿ ಪ್ರಾರಂಭದಲ್ಲಿಯೇ ಸಿನಿಮಾ ಹಾಡುಗಳನ್ನು ಹಾಡುವುದಿಲ್ಲ ಎಂದು ವಿಜಯ ಪ್ರಕಾಶ್ ಘೋಷಿಸಿ ಶಾಸ್ತ್ರೀಯ ಹಾಗೂ ಭಾವಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.

ತಮ್ಮ ತಾತ ಲಕ್ಷ್ಮೀಭಾಗವತ್ ರಚಿಸಿ, ತಂದೆ ರಾಮಶೇಷ ಸಂಗೀತ ಸಂಯೋಜನೆ ಮಾಡಿದ ಶ್ರೀಗಣಾಧಿಪತೇ ನಮೋಸ್ತುತೆ ಗೀತೆ ಹಾಡುವುದರೊಂದಿಗೆ ಗಾಯನ ಪ್ರಾರಂಭಿಸಿದ ಅವರು  ನಂತರ ಬಸವಣ್ಣ ಅವರ ವಚನ ‘ಉಳ್ಳವರು ಶಿವಾಲಯ ಮಾಡುವರು’, ಜಿ.ಎಸ್. ಶಿವರುದ್ರಪ್ಪ ರಚನೆಯ ಕಾಣದ ಕಡಲಿಗೆ ಹಂಬಲಿಸಿದೆ ಮನ, ಎದೆ ತುಂಬಿ ಹಾಡಿದೆನು ಅಂದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಮುಂತಾದ ಗೀತೆಗಳನ್ನು ಹಾಡಿದರು. ವಿಜಯಪ್ರಕಾಶ್ ಅವರ ಹಾಡಿನ ಮೋಡಿಗೆ ಸಾಂಸ್ಕೃತಿಕ ನಗರಿಯ ಜನರು ಭಾವಪರವಶರಾದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: