
ಮೈಸೂರು
ನೋಟು ಹರಿದಿದೆ ಬೇರೆ ನೋಟು ನೀಡಿ ಎಂದ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಪ್ರಯಾಣಿಕನಿಂದ ಹಲ್ಲೆ
ಮೈಸೂರು,ಅ.4:- ನೋಟು ಹರಿದಿದೆ ಬೇರೆ ನೋಟು ನೀಡಿ ಎಂದ ಸರ್ಕಾರಿ ಬಸ್ ಕಂಡಕ್ಟರ್ ನಿಗೆ ಪ್ರಯಾಣಿಕನೋರ್ವ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಈ ಕುರಿತು ನರಸಿಂಹರಾಜ ಠಾಣೆಯಲ್ಲಿ ಸರ್ಕಾರಿ ಬಸ್ ನಿರ್ವಾಹಕ (ಕಂಡಕ್ಟರ್) ನಟರಾಜ್ ಎಂಬವರು ದೂರು ನೀಡಿದ್ದಾರೆ. ನಟರಾಜ ಅವರು ಸರ್ಕಾರಿ ನೌಕರರಾಗಿದ್ದು, ಅವರು ಕೆ.ಎಸ್.ಆರ್.ಟಿ.ಸಿ ಯಲ್ಲಿ ನಿರ್ವಾಹಕರಾಗಿದ್ದಾರೆ. ಇವರು ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ ಸುಮಾರು 1-30 ರ ಸುಮಾರಿಗೆ ಸಿಬಿಎಸ್ ಬಿಟ್ಟು ನಾಯ್ಡು ನಗರದ ಕಡೆಗೆ ಬಸ್ ನಲ್ಲಿ ನಿರ್ವಾಹಕ ವೃತ್ತಿ ಮಾಡಿಕೊಂಡು ಹೋಗುತ್ತಿದ್ದಾಗ ಗುಡ್ಶಫರ್ಡ್ ಶಾಲೆಯ ಮುಂಭಾಗದ ಬಸ್ ಸ್ಟಾಪ್ ನಲ್ಲಿ ಓರ್ವ ಪ್ರಯಾಣಿಕ ಬಸ್ ಹತ್ತಿದರು. ಅವರು ತಮ್ಮ ಜೇಬಿನಿಂದ 20ರೂ. ಮುಖಬೆಲೆಯ ಒಂದು ಹಳೆಯ ಹರಿದ ನೋಟನ್ನು ಟಿಕೆಟ್ ಸಂಬಂಧ ನೀಡಿದ್ದು ಆಗ ಈ ನೋಟು ಹರಿದಿದೆ, ಬೇರೆ ನೋಟು ಕೊಡಿ ಎಂದು ಕೇಳಿದಾಗ ಎನ್.ಆರ್ ಮೊಹಲ್ಲಾದ ಎಫ್.ಟಿ.ಎಸ್ ವೃತ್ತದ ಬಸ್ ನಿಲ್ದಾಣದ ಬಳಿ ತನಗೆ ವ್ಯಕ್ತಿಯು ಹಲ್ಲೆ ಮಾಡಿ, ಉಂಗುರವಿದ್ದ ಬೆರಳಿನಿಂದ ಮೂಗಿಗೆ ಹಲ್ಲೆ ಮಾಡಿ ನಂತರ ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)