
ಪ್ರಮುಖ ಸುದ್ದಿಮೈಸೂರು
ಮಿನಿ ವಿಧಾನಸೌಧದ ಮುಂದೆ ವಾಲ್ಮೀಕಿ ಪುತ್ಥಳಿ ಸ್ಥಾಪನೆ : ದಿ.13ರಂದು ಪ್ರತಿಭಟನೆ ಎಚ್ಚರಿಕೆ
ಮೈಸೂರು,ಅ.4 : ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ನಗರದ ಮಿನಿ ವಿಧಾನಸೌಧದ ಮುಂದೆ ಸ್ಥಾಪಿಸಲಾಗುವುದೆಂದು ನೀಡಿದ್ದ ಆಶ್ವಾಸನೆಯನ್ನು ಈಡೇರಿಸಬೇಕು ಇಲ್ಲವೇ ವಾಲ್ಮೀಕಿ ಜಯಂತಿಯಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆಯು ಎಚ್ಚರಿಕೆ ನೀಡಿದೆ.
ಕಳೆದ ಹತ್ತು ವರ್ಷಗಳಿಂದಲೂ ಮನವಿ ಮಾಡಿರುವದಲ್ಲದೇ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದ್ದು, ಆ ಸಂದರ್ಭದಲ್ಲಿ ಜಿಲ್ಲಾಡಳಿತ ಕೊಟ್ಟ ಭರವಸೆಯನ್ನು ಉಳಿಸಿಕೊಂಡಿಲ್ಲ, ವಾಲ್ಮೀಕಿ ಒಬ್ಬ ಶೂದ್ರ ದಲಿತ, ಹಿಂದುಳಿದ ನಾಯಕ ಸಮುದಾಯಕ್ಕೆ ಸೇರಿದ ಎಂಬುವುದರಿಂದ ಈ ಕಾರ್ಯ ಹಿಂದುಳಿದಿದೆ ಎಂದು ಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಈ ವಿಷಯವಾಗಿ ಮಾಜಿ ಸಚಿವ ದಿ.ಚಿಕ್ಕಮಾದು, ಶಾಸಕ ಜಿ.ಟಿ.ದೇವೇಗೌಡರು, ರಾಮದಾಸ್, ನಾಗೇಂದ್ರ ಸೇರಿದಂತೆ ಹಲವು ಮಾಜಿ ಜನಪ್ರತಿನಿಧಿಗಳು ಒಲವು ತೋರಿದ್ದರು, ಆದರೆ ಮಹಾನಗರ ಪಾಲಿಕೆ ಮಾತ್ರ ಕಾನೂನಿನ ತೊಡಕೆಂದು ನೆಪವೊಡ್ಡಿ ಇದನ್ನು ಮುಂದೂಡುತ್ತಿರುವುದು ಖಂಡನೀಯ. ಇನ್ನಾದರೂ ಪ್ರತಿಮೆಯನ್ನು ಸ್ಥಾಪಿಸಬೇಕು ಇಲ್ಲವೇ ಇದೇ. ಅ.13ರಂದು ಜಿಲ್ಲಾಡಳಿತ ಹಮ್ಮಿಕೊಂಡಿರುವ ವಾಲ್ಮೀಕಿ ಜಯಂತಿಯಿಂದ ದೂರವುಳಿದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಜಿಲ್ಲಾಧ್ಯಕ್ಷ ಚನ್ನಾನಾಯಕ, ಪ್ರಭಾಕರ್ ಹುಣಸೂರು, ಶಿವಕುಮಾರಸ್ವಾಮಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)