ಕರ್ನಾಟಕಪ್ರಮುಖ ಸುದ್ದಿ

ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ: ಸಿಎಂ ಬಿಎಸ್ವೈ ಗೆ ರಿಲೀಫ್

ಬೆಂಗಳೂರು,ಅ.5-ಇದೇ ತಿಂಗಳ 10 ರಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಇಕ್ಕಟ್ಟಿನಲ್ಲಿ ಎದುರಿಸುವ ಚಿಂತೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.

ಉತ್ತರ ಕರ್ನಾಟಕದ ನೆರೆಯಿಂದ ತತ್ತರಿಸಿ ಹೋಗಿದ್ದರೂ ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಲು ವಿಳಂಬ ಧೋರಣೆಯನ್ನು ಅನುಸರಿತ್ತು. ಇದರಿಂದ ಪ್ರತಿಪಕ್ಷಗಳು, ಸಾರ್ವಜನಿಕರು, ಸ್ವಪಕ್ಷೀಯರಿಂದಲೂ ಆಕ್ರೋಶಕ್ಕೆ ಗುರಿಯಾಗಿತ್ತು.

ಇದನ್ನೇ ಗುರಿಯಾಗಿಟ್ಟುಕೊಂಡು ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮದೇ ರೀತಿಯಲ್ಲಿ ರಣತಂತ್ರ ರೂಪಿಸುವಲ್ಲಿ ನಿರತವಾಗಿದ್ದವು. ಅಧಿವೇಶನ ಹೇಗೆ ಎದುರಿಸುವುದು ಎಂಬ ಚಿಂತೆಯಲ್ಲಿದ್ದ ಯಡಿಯೂರಪ್ಪ ಅವರಿಗೆ ಕೇಂದ್ರ ಸರ್ಕಾರ ನೆರೆ ಪರಿಹಾರ ಘೋಷಣೆ ಮಾಡಿರುವುದರಿಂದ ಕೊಂಚ ನಿರಾಳ ಸಿಕ್ಕಂತಾಗಿದೆ. ಪ್ರತಿಪಕ್ಷಗಳನ್ನು ಸಮರ್ಥವಾಗಿಯೇ ಎದುರಿಸಲು ಯಡಿಯೂರಪ್ಪ ಸಜ್ಜಾಗುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ನೆರೆ ಪರಿಹಾರ ಬಿಡುಗಡೆ ಬಗ್ಗೆಯೇ ಪರ ಹಾಗೂ ವಿರೋಧದ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳು, ವಾದ-ಪ್ರತಿವಾದಗಳು ಕೇಳಿಬರುತ್ತಿದ್ದವು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರಗಳು ಅಸ್ತಿತ್ವದಲ್ಲಿ ಇರದೇ ಇದ್ದಿದ್ದರೆ, ಈ ಚರ್ಚೆ ತಾರಕ್ಕೇರುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ನಡೆಸುತ್ತಿರುವುದರಿಂದ ಸಹಜವಾಗಿಯೇ ಜನರು ತಕ್ಷಣ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಹೊಂದಿದ್ದರು. ಆದರೆ, ಯಾವಾಗ ಆ ನಿರೀಕ್ಷೆ ಹುಸಿಯಾಗತೊಡಗಿತೋ ಜನರ ಸಹನೆಯ ಕಟ್ಟೆಯೊಡಯಲಾರಂಭಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವರ ವಿರುದ್ಧ ಟೀಕೆಗಳ ಸುರಿಮಳೆಯೇ ಆರಂಭವಾಗಿತ್ತು.

ಇನ್ನು ಬಿಜೆಪಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ನೆರೆ ಪರಿಹಾರ ನೀಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರುವಂತಿರಲಿಲ್ಲ. ಪರಿಹಾರ ನೀಡದಿರುವುದನ್ನು ಜನರ ಬಳಿ ಸಮರ್ಥಿಸಿಕೊಳ್ಳುವಂತೆಯೂ ಇರಲಿಲ್ಲ. ಯಡಿಯೂರಪ್ಪ ಅವರು ಇನ್ನೆರಡು ದಿನಗಳಲ್ಲಿ ಕೇಂದ್ರ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ಹೇಳಿಕೆಗಳನ್ನು ಕಳೆದ ಹಲವು ದಿನಗಳಿಂದ ಪುನರುಚ್ಛರಿಸಿ ಸುಸ್ತಾಗಿದ್ದರು. ಕೊನೆಗೆ ಯಡಿಯೂರಪ್ಪ ಅವರ ಹೇಳಿಕೆಯನ್ನೂ ಜನರು ಲೇವಡಿ ಮಾಡುವ ಹಂತವೂ ತಲುಪಿತ್ತು. (ಎಂ.ಎನ್)

Leave a Reply

comments

Related Articles

error: