ಪ್ರಮುಖ ಸುದ್ದಿಮೈಸೂರು

ಸಂಸದ ಪ್ರತಾಪ್ ಸಿಂಹನ ಪ್ರತಾಪದ ವಿರುದ್ಧ ಗುಡುಗಿದ ಮಹಿಷ ದಸರಾ ಸಮಿತಿ

ಮೈಸೂರು.ಅ.5 : ತಮ್ಮ ವಿರೋಧ ಯಾವುದೇ ಜಾತಿ, ಧಾರ್ಮಿಕ ಆಚರಣೆ ವಿರುದ್ಧವಲ್ಲ, ಬದಲಾಗಿ ಪ್ರತಾಪ ತೋರಿದ ಸಂಸದ ಪ್ರತಾಪ್‌ಸಿಂಹನ ವಿರುದ್ಧ ಮಾತ್ರ ಎಂದು ಮಹಿಷ ದಸರಾ ಆಚರಣಾ ಸಮಿತಿ ಸ್ಪಷ್ಟ ಪಡಿಸಿತು.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪುರುಷೋತ್ತಮ್ ಮಾತನಾಡಿ, ಹಲವಾರು ವರ್ಷಗಳಿಂದ ಚಾಮುಂಡಿಬೆಟ್ಟದಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಬರುತ್ತಿದ್ದ ಮಹಿಷ ದಸರಾಕ್ಕೆ ಸಂಸದ ಪ್ರತಾಪ್‌ಸಿಂಹ ತನ್ನ ಗೂಂಡಾ ವರ್ತನೆ ಮೂಲಕ ಅಡ್ಡಿ ಪಡಿಸಿದ್ದಾರೆ. ಜೊತೆಗೆ, ಪೊಲೀಸರನ್ನೂ ಅವಹೇಳನ ಮಾಡಿದ್ದು, ಕೇವಲ ಅವರ ಆ ವರ್ತನೆ ಮಾತ್ರ ಸಮಿತಿ ವಿರೋಧಿಸುತ್ತಿದೆ ಎಂದು ಸ್ಪಷ್ಟ ಪಡಿಸಿದರು.

ಇದೇ ವೇಳೆ, ಸಂಸದರ ತೇಜೋವಧೆಯಾಗಿದೆ, ಒಕ್ಕಲಿಗ ಸಮುದಾಯವನ್ನೂ ಸಮಿತಿ ವಿರೋಧಿಸುತ್ತಿದೆ ಎಂಬ ಹೊಟೇಲ್ ಮಾಲೀಕರ ಸಂಘದ ಆರೋಪ ಸತ್ಯಕ್ಕೆ ದೂರ ಎಂದು ವಿವರಿಸಿದರು.

ಜೊತೆಗೆ, ತಮ್ಮ ಸಮಿತಿ ಜಾತಿ ಸಂಘರ್ಷಕ್ಕೆ ಎಂದೂ ಇಳಿದಿಲ್ಲ. ಆದರೂ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಳಿಕ, ತಾವೂ ಸಹಾ ಕಳೆದ 40 ವರ್ಷಗಳಿಂದ ಬೆಟ್ಟಕ್ಕೆ ನಡಿಗೆಗೆ ಹೋಗುತ್ತಿದ್ದು, ಅಲ್ಲಿ ಮಹಿಷನಿಗೆ ನಮಸ್ಕರಿಸುತ್ತಿರುವುದಾಗಿ ತಿಳಿಸಿ, ದಲಿತ ಮುಖಂಡ ಚೋರನಹಳ್ಳಿ ಶಿವಣ್ಣ ಅವರು ಪ್ರತಾಸಿಂಹ ಅವರ ಕುಟುಂಬದ ಬಗ್ಗೆ ಅವಹೇಳನ ಮಾಡಿದ್ದಾರೆಂಬ ಮಾತು ಕೇಳಿಬಂದಿದ್ದು, ಅದರ ಬಗ್ಗೆ ಕ್ಷಮೆ ಯಾಚಿಸುವುದಾಗಿ ತಿಳಿಸಿದರು.

ಇನ್ನು, ತಾವು ಯಾರೂ ಚಾಮುಂಡೇಶ್ವರಿ ದಸರಾ ವಿರೋಧಿಸುವುದಿಲ್ಲ, ಇದರೊಡನೆ ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರಾಟ ಮಾಡುವವರು ಮೊದಲಾದ ಯಾರಿಗೂ ಮಹಿಷ ದಸರಾ ಹೆಸರಿನಲ್ಲಿ ತೊಂದರೆ ನೀಡಿಲ್ಲ ಎಂದು ಸಹಾ ಹೇಳಿದರು.

ಮತ್ತೊಬ್ಬ ದಲಿತ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಸಂಸದರ ಕ್ರಮ ಅಪ್ರಬುದ್ಧವಾದುದಾಗಿದ್ದು, ಅವರು ತಮ್ಮ ಮಿದುಳನ್ನು ಖಾಲಿ ಮಾಡಿಕೊಂಡಿದ್ದಾರೆ. ಜೊತೆಗೆ, ಜಾತಿ ಇರಬೇಕೆಂದು ಬಯಸುವವರಾಗಿದ್ದು, ಅವರ ಅಂತಹ ಧೋರಣೆ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ನುಡಿದರು.

ದಲಿತ ಮುಖಂಡರಾದ ಹಿನಕಲ್ ಸೋಮು, ಜಿ.ಎಂ. ಮಹದೇವು ಹಾಜರಿದ್ದರು. (ವರದಿ :ಕೆ.ಎಂ.ಆರ್)

 

Leave a Reply

comments

Related Articles

error: