ಮೈಸೂರು

ಗಟ್ಟವಾಡಿ ಗ್ರಾಮದಲ್ಲಿ ಪತ್ನಿ ಕೊಲೆಗೈದ ಪತಿ; ತಾಳಿ ಗಿರವಿ ಇಟ್ಟಿದ್ದೇ ಕಾರಣ?

ನಂಜನಗೂಡು: ನಾಲ್ಕು ದಿನದ ಹಿಂದೆ ನಡೆದ ಗಟ್ಟವಾಡಿ ಗ್ರಾಮದ ಕೊಲೆ‌ ಪ್ರಕರಣವನ್ನ ನಂಜನಗೂಡು ಪೋಲಿಸರು ಭೇಧಿಸಿದ್ದಾರೆ. ಮಂಗಳವಾರದಂದು ಗ್ರಾಮದೇವತೆ ಮಾರಮ್ಮನ ಹಬ್ಬದ ಹಿನ್ನಲೆಯಲ್ಲಿ ಗಟ್ಟವಾಡಿ ಗ್ರಾಮದ ಬಸವಶೆಟ್ಟಿ, ತನ್ನ ಪತ್ನಿ ಮಂಗಳಮ್ಮಳನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಪರಾರಿಯಾಗಿದ್ದ ಈತನ ಬಗ್ಗೆ ನಂಜನಗೂಡಿನ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಾಗಿ ಬಲೆ ‌ಬೀಸಿದ ಇನ್ಸ್’ಪೆಕ್ಟರ್ ಜಿ.ಆರ್.ಶಿವಮೂರ್ತಿ ಅವರ ನೇತೃತ್ವದಲ್ಲಿ ಕವಲಂದೆ ಸಬ್ ಇನ್ಸ್’ಪೆಕ್ಟರ್ ಎಂ.ಶಿವಮಾದಯ್ಯ ಅವರು ಆರೋಪಿ ಬಸವಶೆಟ್ಟಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಪೋಲೀಸರನ್ನು ಕಂಡು ಓಡುತ್ತಿದ್ದ ಈತನನ್ನ ಬೆನ್ನಟ್ಟಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.

ತಾಳಿ ಗಿರವಿ ಇಟ್ಟಿದ್ದೇ ಕೊಲೆಗೆ ಕಾರಣ :

ಇನ್ನು ಕೊಲೆ ಮಾಡಿರುವ ಬಗ್ಗೆ ವಿಚಾರಣೆಗೆಂದು ಗಟ್ಟವಾಡಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ ಪೊಲೀಸರಿಗೆ ಶಾಕ್ ಕಾದಿತ್ತು. ಈ ವೇಳೆ ಸ್ಥಳ ಪರಿಶೀಲನೆ ನಡೆಸುವ ವೇಳೆ ವಿಚಾರಣೆ ಮಾಡಿದಾಗ, ಬಸವಶೆಟ್ಟಿ ತನ್ನ ಪತ್ನಿ ಮಂಗಳಮ್ಮನನ್ನ ಕೊಲೆ ಮಾಡಿರುವುದಕ್ಕೆ ವಿವರ ನೀಡಿದ್ದಾನೆ.

ಅದು ಬಸವಶೆಟ್ಟಿ ಕಟ್ಟಿದ ತಾಳಿಯನ್ನ, ಮಂಗಳಮ್ಮ ಗಿರವಿ ಇಟ್ಟಿದ್ದಳು. ಆದರೆ ಗಿರವಿ ಇಟ್ಟಿರುವ ವಿಷಯವನ್ನು ಬಸವಶೆಟ್ಟಿಗೆ ಹೇಳಿರಲಿಲ್ಲ. ಇದರಿಂದ ಕೊಪಗೊಂಡ ಬಸವಶೆಟ್ಟಿ, ಬದುಕಿರುವಾಗಲೆ ತಾಳಿಯನ್ನು ಗಿರವಿ ಇಟ್ಟರೆ ನಾನು ಸತ್ತಂತೆ ಎಂದಿದ್ದಾನೆ. ಇದು ಮಾತಿಗೆ ಮಾತು ಬೆಳೆದು, ಜಗಳ ತೆಗೆದ ಪತಿ ಬಸವಶೆಟ್ಟಿ ಕುಡಿದ ಮತ್ತಿನಲ್ಲಿ ಕೋಪದಿಂದ ಹತ್ಯೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಪ್ರಕರಣವನ್ನ ಎ.ಎಸ್.ಪಿ. ಮಹಮ್ಮದ್ ಸುಜೀತಾ ಮಾರ್ಗದರ್ಶನದಲ್ಲಿ ಭೇಧಿಸಲಾಯಿತು. ಆರೋಪಿಯನ್ನು ನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

comments

Related Articles

error: