ಕ್ರೀಡೆ

323 ರನ್‌ ಗೆ ಡಿಕ್ಲೇರ್ ಘೋಷಿಸಿದ ಭಾರತ: ದ.ಆಫ್ರಿಕಾಗೆ 395 ರನ್‌ ಗುರಿ

ವಿಶಾಖಪಟ್ಟಣ,ಅ.5-ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 323 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದೆ.

ಇದರೊಂದಿಗೆ ದಕ್ಷಿಣ ಆಫ್ರಿಕಾ ಗೆಲುವಿಗೆ 395 ರನ್‌ಗಳ ಬೃಹತ್ ಗುರಿ ಒಡ್ಡಿದೆ. ಭಾರತ ಒಡ್ಡಿರುವ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ದ.ಆಫ್ರಿಕಾ ನಾಲ್ಕನೇ ದಿನದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿದೆ. ಇದೀಗ ಒಂಬತ್ತು ವಿಕೆಟ್ ಬಾಕಿ ಉಳಿದಿರುವಂತೆಯೇ ಕೊನೆಯ ದಿನದಾಟದಲ್ಲಿ ಗೆಲುವಿಗಾಗಿ 384 ರನ್ ಗಳಿಸಬೇಕಾದ ಅಗತ್ಯವಿದೆ. ಹಾಗಾಗಿ ಗೆಲುವು ದೂರದ ಮಾತಾಗಿರುವುದರಿಂದ ಡ್ರಾ ಫಲಿತಾಂಶಕ್ಕಾಗಿ ಹೋರಾಟ ನಡೆಸಬೇಕಿದೆ. ಇನ್ನೊಂದೆಡೆ ಟೀಮ್ ಇಂಡಿಯಾ ಗೆಲುವಿಗಾಗಿ ಸರ್ವ ಪ್ರಯತ್ನವನ್ನು ಮಾಡಲಿದೆ.

ದ್ವಿತೀಯ ಇನ್ನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ (127) ಹಾಗೂ ಚೇತೇಶ್ವರ ಪೂಜಾರ ಆಕರ್ಷಕ ಅರ್ಧಶತಕದ (84) ನೆರವಿನಿಂದ ಟೀಂ ಇಂಡಿಯಾ 323 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಅಮೋಘ ಶತಕ ಬಾರಿಸಿದ ರೋಹಿತ್ ಶರ್ಮಾ 127 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 149 ಎಸೆತಗಳನ್ನು ಎದುರಿಸಿದ ರೋಹಿತ್ 10 ಬೌಂಡರಿ ಹಾಗೂ ಏಳು ಸಿಕ್ಸರ್‌ಗಳಿಂಗ 127 ರನ್ ಗಳಿಸಿದರು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ (40) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಕೊನೆಯ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ (31*) ಹಾಗೂ ಅಜಿಂಕ್ಯ ರಹಾನೆ (27*) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ದ.ಆಫ್ರಿಕಾ ಪರ ಕೇಶವ್ ಮಹಾರಾಜ್ ಎರಡು ವಿಕೆಟ್ ಪಡೆದರು.

ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನ ಶತಕವೀರ ಡೀನ್ ಎಲ್ಗರ್‌ರನ್ನು (2) ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಮೊದಲು ಅಂಪೈರ್ ನಾಟೌಟ್ ನೀಡಿದರೂ ಡಿಆರ್‌ಎಸ್ ಮನವಿಗೆ ಮೊರೆ ಹೋಗುವ ಮೂಲಕ ನಿರ್ಣಾಯಕ ವಿಕೆಟ್ ಪಡೆಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.

ಈ ಮೊದಲು ಭಾರತದ 502 ರನ್‌ಗಳಿಗೆ ಉತ್ತರವಾಗಿ ದಿಟ್ಟ ಪ್ರತ್ಯುತ್ತರ ನೀಡಿರುವ ದ.ಆಫ್ರಿಕಾ, ಡೀನ್ ಎಲ್ಗರ್ (160) ಹಾಗೂ ಕ್ವಿಂಟನ್ ಡಿ ಕಾಕ್ (111) ಅಮೋಘ ಶತಕ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (55) ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 431 ರನ್ ಪೇರಿಸಿತ್ತು. (ಎಂ.ಎನ್)

 

Leave a Reply

comments

Related Articles

error: