ಪ್ರಮುಖ ಸುದ್ದಿ

ಸಿದ್ದರಾಮಯ್ಯ ಹಿಸ್ಟ್ರಿ ಮೇಸ್ಟ್ರು ಆಗೋಕೆ ಹೊರಟಿದ್ದಾರೆ : ಸಚಿವ ಸುರೇಶ್ ಕುಮಾರ್ ವ್ಯಂಗ್ಯ

ರಾಜ್ಯ( ಮಡಿಕೇರಿ) ಅ.6 :- “ಮೊದಲು ವ್ಯಾಕರಣ ಪಾಠ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ಇದೀಗ ಹಿಟ್ಲರ್‍ನನ್ನು ಪ್ರಸ್ತಾಪಿಸಿ ಹಿಸ್ಟ್ರಿ ಮೇಸ್ಟ್ರಾಗಲು ಹೊರಟಿದ್ದಾರೆ” ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಹಿಟ್ಲರ್‍ಗೆ ಹೋಲಿಸಿದ ಸಿದ್ದರಾಮಯ್ಯ ಅವರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್’ ಘೋಷಣೆಯ ಮೂಲಕ ಮೋದಿ ಅವರು ನಡೆಸುತ್ತಿರುವ ಅಭಿವೃದ್ಧಿ ಪರ ಕಾರ್ಯಕ್ರಮಗಳ ಬಗ್ಗೆ ಇಡೀ ದೇಶಕ್ಕೆ ಅರಿವಿದೆ. ಅವರನ್ನು ಹಿಟ್ಲರ್‍ಗೆ ಹೋಲಿಕೆ ಮಾಡಿರುವುದು ಸಿದ್ದರಾಮಯ್ಯ ಅವರ ಧೋರಣೆಯನ್ನು ತೋರಿಸುತ್ತದೆ ಎಂದರು.
ರಾಜ್ಯಕ್ಕೆ ಕೇಂದ್ರದಿಂದ ಪರಿಹಾರ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಮೋದಿ ಅವರು ಬಿಜೆಪಿಯವರಿಗಿಂತ ನನಗೇ ಹತ್ತಿರವಿದ್ದರು. ನಾನೇ ಈ ಬಗ್ಗೆ ಮಾತನಾಡುತ್ತಿದ್ದೆ ಎಂದು ನೀಡಿರುವ ಹೇಳಿಕೆಗೆ ಉತ್ತರಿಸಿದ ಸಚಿವರು ಕುಮಾರಸ್ವಾಮಿ ಅವರು ಯಾವ ವಿಚಾರವನ್ನು ಯಾವಾಗ, ಯಾಕೆ, ಹೇಗೆ ವ್ಯಾಖ್ಯಾನ ಮಾಡುತ್ತಾರೆ ಎನ್ನುವುದೇ ಯಾರಿಗೂ ತಿಳಿದಿಲ್ಲವೆಂದು ವ್ಯಂಗ್ಯವಾಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: