ಪ್ರಮುಖ ಸುದ್ದಿ

ಕತ್ತಲೆಕಾಡು-ಕ್ಲೋಸ್‍ಬರ್ನ್ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ

ರಾಜ್ಯ( ಮಡಿಕೇರಿ),ಅ.6 :- ಶಾಲೆಯ ಶಿಥಿಲಾವಸ್ಥೆಯ ಕೊಠಡಿ ಸಮಸ್ಯೆ ಬಗ್ಗೆ ಫೇಸ್‍ಬುಕ್ ಮೂಲಕ ಗಮನ ಸೆಳೆದ ವಿಚಾರವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತಲೆಕಾಡು-ಕ್ಲೋಸ್‍ಬರ್ನ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ವರ್ಷವುರುಳಿದರೂ ತೆರವು ಮಾಡದಿರುವ ಬಗ್ಗೆ ಶಾಲೆಯ ಹಳೆ ವಿದ್ಯಾರ್ಥಿಗಳು ಆಗಸ್ಟ್ 30ರಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನ ಗಮನಿಸಿದ ಸಚಿವರು ತಕ್ಷಣ ಅಪಾಯಕಾರಿ ಕಟ್ಟಡವನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಆದೇಶವನ್ನೂ ನೀಡಿದ್ದರು. ಅದರಂತೆ ಕೆಲವೇ ದಿನದಲ್ಲಿ ಶಿಥಿಲಾವಸ್ಥೆಯ ಕಟ್ಟಡ ತೆರವಾಗುವ ಜತೆಗೆ ನೂತನ ಕಟ್ಟಡ ಕಾಮಗಾರಿಯೂ ಆರಂಭವಾಗಿತ್ತು. ಶೀಘ್ರದಲ್ಲಿ ಶಾಲೆಗೆ ಭೇಟಿ ನೀಡುವುದಾಗಿಯೂ ಫೇಸ್‍ಬುಕ್‍ನಲ್ಲೇ ವಿಷಯ ಹಂಚಿಕೊಂಡಿದ್ದರು.
ಅದರಂತೆ ಶನಿವಾರ ಶಾಲೆಗೆ ಭೇಟಿ ನೀಡಿದ ಸುರೇಶ್ ಕುಮಾರ್ ಅಲ್ಲಿನ ವಾತಾವರಣವನ್ನು ಅವಲೋಕಿಸಿದರು. ಇರುವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿರುವ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ, ಮುಂದೆ ಶಾಲೆಯ ಅಭಿವೃದ್ಧಿಗೆ ಸರ್ಕಾರದಿಂದ ನೆರವಾಗುವುದಾಗಿ ಭರವಸೆ ನೀಡಿದರು. ಸರ್ಕಾರೇತರ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸ್ಪೋಕನ್ ಇಂಗ್ಲೀಷ್ ಕಲಿಸಲು ಮುಂದಾಗಬೇಕು. ಹಾಗಾದಾಗ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ಕತ್ತಲೆಕಾಡು ಶಾಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಾದಲ್ಲಿ ಮುಂದೆ ಪ್ರೌಢಶಾಲೆಯನ್ನೂ ಆರಂಭಿಸುವ ಬಗ್ಗೆಯೂ ಯೋಚಿಸಲಾಗುವುದೆಂದರು.

ಅಮ್ಮನನ್ನು ಮಮ್ಮಿ ಮಾಡಬೇಡಿ..!
ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳ ಜತೆ ಸಚಿವರು ಕೆಲ ಹೊತ್ತು ಕಳೆದರು. ಮನೆಯಲ್ಲಿ ಅಮ್ಮನನ್ನು ಮಮ್ಮಿ ಅಂತ ಕರೆಯುತ್ತೇವೆಂದು ವಿದ್ಯಾರ್ಥಿಗಳು ಹೇಳಿದಾಗ, ಮಮ್ಮಿ ಎಂದರೆ ಶವ ಎಂದರ್ಥ. ನಮ್ಮನ್ನು ಹೆತ್ತು, ಹೊತ್ತು ಸಲಹುವ ಅಮ್ಮನನ್ನು ಮಮ್ಮಿ ಎನ್ನಬೇಡಿ. ಪ್ರೀತಿಯಿಂದ ಅಮ್ಮ ಅಂತ ಕರೆಯಿರಿ ಎಂದು ತಿಳಿ ಹೇಳಿದರು.
ದಸರಾ ರಜೆಯಲ್ಲಿ ಸುಮ್ಮನೆ ಕಾಲ ಕಳೆಯಬೇಡಿ. ಚಂದದ ಕಥೆಗಳನ್ನು ಓದಿ ಅದನ್ನು ಶಾಲೆಯಲ್ಲಿ ಬಂದು ಶಿಕ್ಷಕರಿಗೆ ಹೇಳುವಂತೆ ಸಚಿವರು ಸಲಹೆ ನೀಡಿದರು.

ಸೋಷಿಯಲ್ ಮೀಡಿಯಾ ಸದ್ಬಳಕೆಯಾಗಲಿ 
ಈ ವೇಳೆ ಮಾತನಾಡಿದ ಅವರು, ನಾನು ಈ ಶಾಲೆಗೆ ಬರುವುದಕ್ಕೆ ಫೇಸ್‍ಬುಕ್ ಪ್ರಮುಖ ಕಾರಣ. ಫೇಸ್‍ಬುಕ್‍ನಲ್ಲಿ ಶಾಲೆಯ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ನಾನು ಗಮನಿಸಿ, ಸೂಕ್ತ ಕ್ರಮಕ್ಕೆ ನಿರ್ದೇಶನವಿತ್ತೆ. ಇದೀಗ ಸಮಸ್ಯೆ ಬರೆಹರಿದಿದೆ. ಇಂದು ಸಾಮಾಜಿಕ ಜಾಲತಾಣಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕತ್ತಲೆಕಾಡು ಶಾಲೆಯ ಈ ಪ್ರಕರಣ ಸಾಮಾಜಿಕ ಜಾಲತಾಣಗಳನ್ನು ಉತ್ತಮ ರೀತಿಯಲ್ಲಿ, ಸಮಾಜಮುಖಿಯಾಗಿ ಬಳಸಿಕೊಳ್ಳಬಹುದೆಂಬುದಕ್ಕೆ ಉತ್ತಮ ಉದಾಹರಣೆ ಎಂದರು.
ಈ ಸಂದರ್ಭ ಶಾಲೆಯ ಚಟುವಟಿಕೆಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ತೋರಿಸಲಾಯಿತು. ಎಸ್‍ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿ ಬಳಗದ ವತಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲೆ ಮುಖ್ಯ ಶಿಕ್ಷಕಿ ಸುಜಾತ, ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ಬಿ.ವೈ. ಅಪ್ರು ರವೀಂದ್ರ, ಕಡಗದಾಳು ಗ್ರಾಪಂ ಅಧ್ಯಕ್ಷ(ಪ್ರಭಾರ) ಮಾದೇಟಿರ ತಿಮ್ಮಯ್ಯ, ಸದಸ್ಯರಾದ ಬಿ.ಎನ್. ಪುಷ್ಪವತಿ, ರಮೇಶ್ ರೈ, ಎಸ್‍ಡಿಎಂಸಿ ಅಧ್ಯಕ್ಷ ಸುರೇಶ್(ಕುಟ್ಟ), ಹಳೆ ವಿದ್ಯಾರ್ಥಿಗಳ ಪ್ರತಿನಿಧಿ ಕಿಶೋರ್ ರೈ ಕತ್ತಲೆಕಾಡು, ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಡಿಡಿಪಿಐ ಮಚ್ಚಾಡೋ, ಬಿಇಒ ಗಾಯತ್ರಿ ಮುಂತಾದವರಿದ್ದರು. (ಕೆಸಿಐಎಸ್ಎಚ್)

Leave a Reply

comments

Related Articles

error: