ಪ್ರಮುಖ ಸುದ್ದಿ

ಮಡಿಕೇರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ : ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ : ಸಚಿವ ಸುರೇಶ್ ಕುಮಾರ್

ರಾಜ್ಯ( ಮಡಿಕೇರಿ) ಅ.6 :- ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪೂರ್ವ ಪ್ರಾಥಮಿಕ ತರಗತಿಯೊಂದಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‍ಕೆಜಿ ಮತ್ತು ಯುಕೆಜಿ) ಆರಂಭಿಸಲು ಚಿಂತಿಸಲಾಗಿದೆ ಎಂದರು.

ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ಸೈಕಲ್ ವಿತರಣೆ, ಶಿಷ್ಯವೇತನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಿದರೂ ಸಹ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣವೇನು ಎಂಬ ವಿದ್ಯಾರ್ಥಿನಿ ದೇಚಮ್ಮ ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದರು.

ಸರ್ಕಾರಿ ಶಾಲೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅಲ್ಲಿನ ಸ್ಥಳೀಯರು ಸಹ ಶಿಕ್ಷಕರ ಜೊತೆಗೆ ಕೈಜೋಡಿಸಬೇಕಿದೆ. ಇದಕ್ಕೆ ಉತ್ತಮ ಉದಾಹರಣೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ದಟ್ಟದಕಾಡು ಸರ್ಕಾರಿ ಶಾಲೆಯಲ್ಲಿ ಈ ಹಿಂದೆ 30 ಮಕ್ಕಳಿದ್ದರು, ಈಗ 650 ವಿದ್ಯಾರ್ಥಿಗಳಿದ್ದು, ಇದಕ್ಕೆ ಅಲ್ಲಿನ ಸ್ಥಳೀಯರ ಪ್ರಯತ್ನದ ಫಲವಾಗಿದೆ. ಆದ್ದರಿಂದ ಅಲ್ಲಿ ಪ್ರೌಢಶಾಲೆ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹೇಳಿದರು.

ವಿದ್ಯಾರ್ಥಿನಿ ಮೋನಿಕಾ ಅವರು ಶಾಲೆಗಳಲ್ಲಿ ಸ್ಮಾರ್ಟ್ ರೂಮ್ ತರಗತಿ ಆರಂಭಿಸಬೇಕು. ಇದರಿಂದ ಹೆಚ್ಚಿನ ಮನನ ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ರಾಜ್ಯದ ಎಲ್ಲಾ ಶಾಲೆಗಳ ತರಗತಿಗಳಲ್ಲಿ ‘ಸ್ಮಾರ್ಟ್ ರೂಂ’ ಆರಂಭಿಸಲು ಚಿಂತಿಸಲಾಗಿದೆ. ರಾಜ್ಯದ ಉತ್ತರ ಭಾಗದಲ್ಲಿ ಪ್ರವಾಹ ಉಂಟಾಗಿ ಶಾಲಾ ಕಟ್ಟಡಗಳು ಶಿಥಲವಾಗಿ ಕುಸಿದಿವೆ. ಅದನ್ನು ಪುನರ್ ನಿರ್ಮಾಣ ಮಾಡಲು 200 ಕೋಟಿ ರೂ. ಬೇಕಿದೆ. ಸದ್ಯ ಆಸಕ್ತ ಸ್ವಯಂ ಸೇವಾ ಸಂಘಗಳ ಸಹಕಾರದಿಂದ ಶಾಲೆಗಳಲ್ಲಿ ಹಂತ ಹಂತವಾಗಿ ಸ್ಮಾರ್ಟ್ ತರಗತಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಸಂವಾದ ಆರಂಭದಲ್ಲಿ ಪ್ರಶ್ನೆ ಕೇಳಿದ ಪದವಿ ಪೂರ್ವ ತರಗತಿಯ ಹರಿಪ್ರಸಾದ್ ಕೊಡಗು ಜಿಲ್ಲೆ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಖಾಸಗಿ ಶಾಲೆಗಳಲ್ಲಿ ಬಸ್ ವ್ಯವಸ್ಥೆ ಇರುವಂತೆ ಸರ್ಕಾರಿ ಶಾಲೆಗೂ ಸಹ ಬಸ್ ಸೌಲಭ್ಯ ಕಲ್ಪಿಸಬೇಕು ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಶಾಲೆಗೆ ಬರುವ ವಿದ್ಯಾರ್ಥಿಗಳ ಗ್ರಾಮದ ಮಾಹಿತಿ ಒದಗಿಸುವಂತೆ ಅವರು ಹೇಳಿದರು.

ವಿದ್ಯಾರ್ಥಿ ನಿತೀಶ್ ಪಾಠ ಪ್ರವಚನ ಜೊತೆಗೆ ದೈಹಿಕ ಶಿಕ್ಷಕರು ಮತ್ತು ಸಂಗೀತ ಶಿಕ್ಷಕರನ್ನು ನಿಯೋಜಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ವಿದ್ಯಾರ್ಥಿನಿ ಅನ್ಸರ್ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಬೈಸಿಕಲ್ ವಿತರಣೆ, ಹಾಜರಾತಿ ಹೆಚ್ಚಿದ್ದಲ್ಲಿ ಪ್ರೋತ್ಸಾಹ ಧನ ಹೀಗೆ ಹಲವು ಕಾರ್ಯಕ್ರಮಗಳಿವೆ. ಶಾಲೆಯಿಂದ ಹೊರಗುಳಿಯದಂತೆ ಮಾಡಲು ಹೆಚ್ಚಿನ ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವಿದ್ಯಾರ್ಥಿ ಜಯಚಂದ್ರ ಅವರು ಶಿಕ್ಷಣ ಪಡೆದು ಉದ್ಯೋಗವಿಲ್ಲದೆ ಸೋಮಾರಿಗಳಾಗಿರುವವರ ಸಂಖ್ಯೆ ಹೆಚ್ಚಿದೆ. ಈ ರೀತಿಯಾದರೆ ಹೇಗೆ ಎಂದು ಪ್ರಶ್ನಿಸಿದರು.

ವಿದ್ಯಾರ್ಥಿಗಳಲ್ಲಿ ಗುರಿ, ಉದ್ದೇಶ ಇರಬೇಕು. ರೋಲ್ ಮಾಡಲ್‍ಗಳ ಮಾಹಿತಿ ಇರಬೇಕು. ಪೋಷಕರು, ಸಮಾಜ ಮತ್ತು ವೈಯಕ್ತಿಕವಾಗಿ ಚೆನ್ನಾಗಿರಬೇಕು ಎಂಬುದು ಪ್ರತಿಯೊಬ್ಬರಲ್ಲೂ ಇದ್ದಾಗ ದುಡಿಯುವ ಮನಸ್ಸು ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ನಮಿತಾ ನಮ್ಮ ಶಾಲೆಯಲ್ಲಿ ಕಂಪ್ಯೂಟರ್, ವಿದ್ಯುತ್ ಸಂಪರ್ಕವಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಕಂಪ್ಯೂಟರ್ ಒದಗಿಸಲಾಗುವುದು. ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿದ್ಯಾರ್ಥಿನಿ ರಶ್ಮಿಕಾ ಹೆಚ್ಚಿನ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಬೇಕು ಎಂದರು. ಮತ್ತೊಬ್ಬ ವಿದ್ಯಾರ್ಥಿನಿ ಕಾನೂನು ಪದವಿ ಪಡೆದು ವಕೀಲರಾಗಬೇಕು ಎಂದು ಬಯಸಿದ್ದೇನೆ ಎಂದರು.

ವಿದ್ಯಾರ್ಥಿ ಅಭಿಷೇಕ್ ಪ್ರಾಥಮಿಕ ತರಗತಿಯಿಂದ ಪ್ರಥಮ ವರ್ಷದ ಪೂರ್ವ ಶಿಕ್ಷಣದವರೆಗೆ ಪಬ್ಲಿಕ್ ಪರೀಕ್ಷೆ ಮಾಡಬೇಕು. ಇದರಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

‘ಕಲಿಕಾ ಮಟ್ಟವನ್ನು ಹೆಚ್ಚಿಸಲು ಈ ಪ್ರಯತ್ನಗಳು ನಡೆದಿವೆ. ಆ ನಿಟ್ಟಿನಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಈ ವರ್ಷ ತರಲಾಗುತ್ತಿದ್ದು, ಈ ಬಾರಿ 7 ನೇ ತರಗತಿ ಮಕ್ಕಳನ್ನು ಉತ್ತೀರ್ಣ ಮಾಡಲಾಗುತ್ತದೆ. ಮುಂದಿನ ಸಾಲಿನಿಂದ ಪಬ್ಲಿಕ್ ಪರೀಕ್ಷೆ ಅನುಷ್ಠಾನಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.’

ಯಶವಂತ ಎಂಬ ವಿದ್ಯಾರ್ಥಿ ವಿದ್ಯಾರ್ಥಿಗಳಲ್ಲಿ ತಾರತಮ್ಯ ಉಂಟು ಮಾಡದೆ ಎಲ್ಲರಿಗೂ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು.

ಇದಕ್ಕೆ ಸಚಿವರಾದ ಸುರೇಶ್ ಕುಮಾರ್ ಅವರು ಸಮಾಜದಲ್ಲಿ ಹಲವು ನ್ಯೂನತೆಗಳಿವೆ. ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟರು, ಹಿಂದುಳಿದವರಿಗೆ ಹಲವು ಸೌಲಭ್ಯಗಳನ್ನು ನೀಡಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ವಿದ್ಯಾರ್ಥಿನಿ ಕಲ್ಪನಾ ಅವರು ಸರ್ಕಾರಿ ನೌಕರರ ವಯಸ್ಸನ್ನು 60 ರಿಂದ 55 ಕ್ಕೆ ಇಳಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಯುವ ಜನರಿಗೆ ಉದ್ಯೋಗ ನೀಡಬೇಕು. ವಯಸ್ಸಾದಂತೆ ಉತ್ಸಾಹ ಇರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹೆಚ್ಚು ಉದ್ಯೋಗ ಸೃಷ್ಟಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ಹರ್ಷಿತ ಅವರು ಸಿಇಟಿ, ಎನ್‍ಇಟಿ ಕೋಚಿಂಗ್ ನೀಡಬೇಕು ಎಂದು ಅವರು ಮನವಿ ಮಾಡಿದರು. ತರಬೇತಿ ನೀಡಲು ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ದರ್ಶನ್, ನಂದೀಶ್ ಅವರು ಹಲವು ಪ್ರಶ್ನೆಗಳನ್ನು ಕೇಳಿದರು.

ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರ್ಪಡೆ ಮಾಡಬೇಕು ಎಂದು ವಿದ್ಯಾರ್ಥಿಯೊಬ್ಬರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಸಚಿವರು ನೀವು ಹೇಳುವ ಮಾತು ಯಾರಿಗೆ ತಲುಪಬೇಕು ಅವರಿಗೆ ಮುಟ್ಟಿದೆ ಎಂದು ವೇದಿಕೆಯಲ್ಲಿದ್ದ ಅಧಿಕಾರಿಗಳನ್ನು ನೋಡಿ ಹೆಳಿದರು. ಆ ನಿಟ್ಟಿನಲ್ಲಿ ಹಿಂದಿನ ವಿಧಾನಸಭಾಧ್ಯಕ್ಷರು ಜನಪ್ರತಿನಿಧಿಗಳು ಅನಾರೋಗ್ಯಕ್ಕೆ ತುತ್ತಾದಾಗ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದರೆ ಎಂದರು.

ಸಚಿವರು ಮಾತನಾಡಿ ವಾರದಲ್ಲಿ ಒಂದು ದಿನ ‘ಬ್ಯಾಗ್ ಲೆಸ್ ಡೇ’ ಮಾಡಲು ಚಿಂತಿಸಲಾಗಿದೆ, ವಿದ್ಯಾರ್ಥಿಗಳು ಸಮಾಜ ಮುಖಿಯಾಗಿ ಚಿಂತನೆ ಮಾಡಬೇಕು. ದೇಶಕ್ಕೆ ಹೊರಯಾಗಬಾರದು. ಸಾಮಾಜಿಕ ಕಳಕಳಿ ಇರಬೇಕು ಎಂದು ಸಚಿವರು ನುಡಿದರು.

ಸಂವಾದ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆಂಚಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಧನಂಜಯ ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: