ಪ್ರಮುಖ ಸುದ್ದಿ

ಕಾವೇರಿ ತೀರ್ಥೋದ್ಬವ ಪೂರ್ವಭಾವಿ ಸಭೆ : ತಲಾಕಾವೇರಿ ಕೊಳದಲ್ಲಿ ಪ್ಲಾಸ್ಟಿಕ್ ಬಿಂದಿಗೆ, ಬಾಟಲಿ ಬಳಕೆ ಸಂಪೂರ್ಣ ನಿಷೇಧ : ಶಾಸಕ ಕೆ.ಜಿ.ಬೊಪಯ್ಯ ಸೂಚನೆ

ರಾಜ್ಯ(ಮಡಿಕೇರಿ) ಅ.6 :- ಭಾಗಮಂಡಲ, ತಲಕಾವೇರಿ ದೇವಸ್ಥಾನ ಪ್ರದೇಶದ ವ್ಯಾಪ್ತಿಯಲ್ಲಿ ಮದ್ಯ ಸೇವನೆ ಸಂಪೂರ್ಣ ನಿಷೇಧವಾಗಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಶಾಸಕರಾದ ಕೆ.ಜಿ.ಬೊಪಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ತಲಕಾವೇರಿ ತೀರ್ಥೋದ್ಬವ ಜಾತ್ರೆ ಸಂಬಂಧ ಭಾಗಮಂಡಲದ ಮುಡಿ ಕಟ್ಟಡದಲ್ಲಿ   ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಕೆ.ಜಿ.ಬೊಪಯ್ಯ ಅವರು ಕ್ಷೇತ್ರದಲ್ಲಿ ಧಾರ್ಮಿಕ ವಿಧಿವಿಧಾನಗಳಿಗೆ ಯಾವುದೇ ಚ್ಯುತಿ ಬಾರದಂತೆ ನಡೆದು ಕೊಳ್ಳಬೇಕು. ಹಾಗೂ ಇಲ್ಲಿನ ಆಚಾರ ವಿಚಾರಕ್ಕೆ ಬದ್ಧರಾಗಿ ಯಾತ್ರಿಗಳು ನಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಕಾವೇರಿ ತೀರ್ಥೋದ್ಬವ ಸಂದರ್ಭದಲ್ಲಿ ಕೊಳದಿಂದ ಪ್ಲಾಸ್ಟಿಕ್ ಬಿಂದಿಗೆ, ಪ್ಲಾಸ್ಟಿಕ್ ಬಾಟಲಿಗಳಿಂದ ತೀರ್ಥವನ್ನು ಶೇಖರಿಸಿಕೊಳ್ಳುವುದು ಸಂಪೂರ್ಣ ನಿಷೇಧಿಸಲಾಗಿದ್ದು ಇದನ್ನು ತಪ್ಪದೆ ಪಾಲನೆ ಮಾಡಬೇಕೆಂದು ಶಾಸಕರು ತಿಳಿಸಿದರು.

ತಲಕಾವೇರಿ ಜಾತ್ರೆ ಸಂಬಂಧ ಭಾಗಮಂಡಲ ಗ್ರಾಮ ಪಂಚಾಯಿತಿಗೆ ಸರ್ಕಾರವು 20 ಲಕ್ಷ ರೂ. ಬಿಡುಗಡೆ ಮಾಡಿದ್ದು,  ಅಗತ್ಯ ತುರ್ತು ಕಾಮಗಾರಿಗೆ ಆದ್ಯತೆ ನೀಡಿ ಪೂರ್ಣ ಗೊಳಿಸಬೇಕು. ಜೊತೆಗೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆ ಸೂಚಿಸಿದರು.  ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಕಾರ್ಯ ನಿರ್ವಹಿಸಬೇಕೆಂದು  ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಲಾ ಸಂಕ್ರಮಣ ತೀರ್ಥೋದ್ಬವ ಕಾರ್ಯಕ್ರಮದ ಆಚಾರ, ವಿಚಾರ, ಶ್ರದ್ಧೆ, ಭಕ್ತಿಗೆ ಯಾವುದೇ ಧಕ್ಕೆ ಬಾರದಂತೆ ನಡೆಯಲು ಎಲ್ಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಶಾಸಕರು ತಿಳಿಸಿದರು.

ಜಾತ್ರೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡು ಸಾರ್ವಜನಿಕರಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಈ ಸಂಬಂಧ ಮಾಹಿತಿ ನೀಡಿದ ಮಡಿಕೇರಿ ವಿಭಾಗದ ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ಜಾತ್ರೆ ಸಂದರ್ಭದಲ್ಲಿ ಐನೂರು ಜನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದ್ದು, ಪಾಳಿಯ ಮೇಲೆ ಕರ್ತವ್ಯ ನಿರ್ವಹಿಸಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಭಾಗಮಂಡಲ ಗ್ರಾಮ ಪಂಚಾಯಿತಿ ಕಸ ವಿಲೇವಾರಿಗೆ ತಣ್ಣಿಮಾಣಿ ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೆ ಜಾಗ ಗುರುತಿಸಿದ್ದು, ಅರಣ್ಯ ಇಲಾಖೆ ಇದಕ್ಕೆ ಸಹಕರಿಸದೆ ಇರುವುದಕ್ಕೆ ತೀವ್ರ ಅಸಮದಾನ ವ್ಯಕ್ತಪಡಿಸುತ್ತ, ತಣ್ಣಿಮಾಣಿ ಗ್ರಾಮದಲ್ಲಿ ಕಸವಿಲೆವಾರಿ ಘಟಕ ನಿರ್ಮಾಣಕ್ಕೆ ಸಹಕರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರಾದ ಕೆ.ಜಿ.ಬೊಪಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಭಾಗಮಂಡಲ ಗ್ರಾಮದಲ್ಲಿ ನೆನೆಗುದ್ದಿಗೆ ಬಿದ್ದಿರುವ ಒಳಚರಂಡಿ ನಿರ್ಮಾಣ ಯೋಜನೆ ಮರು ಚಾಲನೆಗೆ ಕ್ರಮವಹಿಸಬೇಕೆಂದು ಸಂಭಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಮೂಲಭೂತ ಸೌಲಭ್ಯ

ಜಾತ್ರೆ ಸಂದರ್ಭದಲ್ಲಿ ವಾಹನ ನಿಲುಗಡೆ, ಕುಡಿಯುವ ನೀರು, ಶೌಚಾಲಯ ಹೀಗೆ ಹಲವು ಮೂಲ ಸೌಲಭ್ಯ ಕಲ್ಪಿಸಬೇಕು. ಜೋತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರತಿ ನೂರು ಮೀಟರ್ ವ್ಯಾಪ್ತಿಯಲ್ಲಿ ಕಸದ ಡಬ್ಬಗಳನ್ನು ಶಾಶ್ವತವಾಗಿ ಜೋಡಿಸುವಂತೆ ಕ್ರಮಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಬಾಗಮಂಡಲ-ತಲಕಾವೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಗುಂಡಿಗಳನ್ನು ತುರ್ತಾಗಿ ಮುಚ್ಚಬೇಕು, ಜೋತೆಗೆ ರಸ್ತೆಬದಿಯ ಕಾಡನ್ನು ಸ್ವಚ್ಛಗೋಳಿಸಿ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಶಾಸಕರು ಸೂಚನೆ ನೀಡಿದರು.

ಸಾರಿಗೆ ಇಲಾಖೆ ಹಾಗೂ ಕೆಎಸ್‍ಆರ್‍ಟಿಸಿ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಜಾತ್ರೆ ಸಂದರ್ಭದಲ್ಲಿ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಬೇಕು ಸಾರ್ವಜನಿಕರಿಗೆ ಕ್ಷೇತ್ರಕ್ಕೆ ಭೇಟಿ ನೀಡಲು ಯಾವುದೇ ತೋದರೆಯಾಗದಂತೆ ಕ್ರಮ ವಹಿಸಬೇಕೆಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಗಂಡೇಶ್ವರ-ತಲಕಾವೇರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಅವರು ಮಾತನಾಡಿ ತೀರ್ಥೋದ್ಬವ ಸಂದರ್ಭದಲ್ಲಿ ವಾಟರ್ ಪ್ರೂಫ್ ಶಾಮಿಯಾನ ಅಳವಡಿಸಲಾಗುವುದು. ಈಗಾಗಲೇ ತಲಕಾವೇರಿ ಭಾಗಮಂಡಲದಲ್ಲಿ ಶಾಶ್ವತ ಸಿ.ಸಿ.ಟಿ.ವಿ ಅಳವಡಿಸಲಾಗಿದ್ದು ಜೊತೆಗೆ ಧ್ವನಿ ವರ್ಧಕ ಅಳವಡಿಲಾಗಿದೆ ಎಂದು ತಿಳಿಸಿದರು.

ತೀರ್ಥೊದ್ಬವ ಸಂದರ್ಭದಲ್ಲಿ ಸ್ವಯಂ ಸೇವಕರು ತೀರ್ಥ ವಿತರಣೆ ಮಾಡಲಿದ್ದು, ಭಕ್ತಾಧಿಗಳು ಸಂಯಮದಿಂದ ವರ್ತಿಸಿ ಕೊಳದಲ್ಲಿ ಯಾವುದೆ ತರನಾದ ಪ್ಲಾಸ್ಟಿಕ್ ಬಿಂದಿಗೆಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿರುವುದಾಗಿ ತಿಳಿಸಿದರು.

ಕಳೆದ ವರ್ಷ ನಡೆದುಕೊಂಡು ಬಂದ ನಿರ್ಭಂದನೆಗಳನ್ನು ಮುಂದುವರೆಸುತ್ತಿದ್ದು, ಕೊಳದ ಬಳಿ ಅನಗತ್ಯ ನೂಕುನುಗ್ಗಲನ್ನು  ತಪ್ಪಸಲು ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು. ಜೋತೆಗೆ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಪೊಲೀಸರು ಜಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕು. ವಾಹನ ನಿಲುಗಡೆಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಭಗಂಡೇಶ್ವರ ದೇವಸ್ಥಾನದ ತಕ್ಕ ಮುಖ್ಯಸ್ತರಾದ ಮೋಟಯ್ಯ ಅವರು ಮಾತನಾಡಿ ದೇವಸ್ಥಾನದ ಕಟ್ಟುಪಾಡುಗಳನ್ನು ಎಲ್ಲರೂ  ಪಾಲಿಸಬೇಕು ಅಕ್ಟೋಬರ್ 15 ಕ್ಕೆ ಅಕ್ಷಯ ಪಾತ್ರೆ, ಭಂಡಾರ ಶಾಸ್ತ್ರ ನಡೆಯುತ್ತದೆ ಎಂದು ತಿಳಿಸುತ್ತ ದೇವತ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ರಾಧಕೃಷ್ಣ ನಾಯಕ್ ಎಂಬುವವರು ಭಗಂಡೇಶ್ವರ ದೇವಸ್ಥಾನದ ವ್ಯಾಪ್ತಿಯಲ್ಲಿರುವ ತಮ್ಮ ಎರಡು ಏಕರೆ ಜಾಗವನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿರುವ ಬಗ್ಗೆ ಶಾಸಕರಾದ ಕೆ.ಜಿ.ಬೊಪಯ್ಯ ತಿಳಿಸಿದರು.

ಸಭೆಯಲ್ಲಿ ಗ್ರಾಮಸ್ಥರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಲವು ಸಲಹೆ ಸೂಚನೆ ನೀಡಿ, ಭಾಗಮಂಡಲ-ತಲಕಾವೇರಿ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಶಾಶ್ವತ ಕಾಮಗಾರಿಗಳ ಕುರಿತು ಮಾಹಿತಿ ಅಂಚಿಕೊಂಡರು. ಸಭೆಗೂ ಮೊದಲು ಶಾಸಕರಾದ ಕೆ.ಜಿ.ಬೊಪಯ್ಯ ಅವರು 58 ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದರು.

ಸಭೆಯಲ್ಲಿ ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಜಿ.ಪಂ.ಸದಸ್ಯರಾದ ಕವಿತ ಪ್ರಭಾಕರ್, ಮಡಿಕೇರಿ ತಾ.ಪಂ.ಅಧ್ಯಕ್ಷರಾದ ಶೋಭ ಮೋಹನ್, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷರು, ಜಿ.ಪಂ.ಉಪ ಕಾರ್ಯದರ್ಶಿ ಗೂಡೂರು ಭೀಮಸೇನ, ಉಪ ವಿಭಾಗಧಿಕಾರಿ ಟಿ.ಜವರೇಗೌಡ, ಮಡಿಕೇರಿ ತಹಶೀಲ್ದಾರ್ ಮಹೇಶ್ ತಾ.ಪಂ.ಇಒ ಲಕ್ಷ್ಮಿ, ಪ್ರಮುಖರಾದ ಮನುಮುತ್ತಪ್ಪ, ಎಂ.ಬಿ.ದೇವಯ್ಯ, ನಾರಾಯಣಚಾರ್ ಅವರು ಹಲವು ವಿಚಾರಗಳ ಕುರಿತು ಮಾತನಾಡಿದರು. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: