ಪ್ರಮುಖ ಸುದ್ದಿಮೈಸೂರು

ಜಂಬೂ ಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಜನಸಾಗರ ನಿರೀಕ್ಷೆ : ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ 

ಮೈಸೂರು,ಅ.8:-  ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಜನಸಾಗರ ಹರಿದು ಬರಲಿದ್ದು ಈ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್  ಏರ್ಪಡಿಸಲಾಗಿದೆ.

ಜಂಬೂ ಸವಾರಿ ಮೆರವಣಿಗೆ ಸಾಗುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಭದ್ರತೆಗಾಗಿ ಮೈಸೂರು ನಗರದಿಂದ 2978, ಹೊರ ಜಿಲ್ಲೆಗಳಿಂದ 4429 ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಹಾಗೂ 1000 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಒಟ್ಟು 8407 ಪೋಲಿಸರನ್ನು  ನಿಯೋಜನೆ ಮಾಡಲಾಗಿದೆ.

ಬಸ್ ನಲ್ಲಿ ಸಿಸಿಟಿವಿ ವ್ಯವಸ್ಥೆ, ಬಾಡಿವೊರ್ನ್  ಔಟ್ ಕ್ಯಾಮೆರಾ,ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿ ಮತ್ತು ಫೋಟೋ ಗ್ರಫಿ  ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್ ಕಮಾಂಡ್ ಸೆಂಟರ್ ವಾಹನ ಬಳಸಲಾಗುತ್ತಿದೆ. ನಗರದ 20 ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ತೆರಯಲಾಗಿದೆ.  ಪೊಲೀಸ್ ಸಹಾಯ ಕೇಂದ್ರ  ಬೆಳಗ್ಗೆ 9 ರಿಂದ ರಾತ್ರಿ 10 ಗಂಟೆವರೆಗೆ  ಕರ್ತವ್ಯ ನಿರ್ವಹಿಸಲಿವೆ.

ಇನ್ನು ಅಪರಾಧ ಪ್ರಕರಣ ತಡೆಯುವ ಸಲುವಾಗಿ ವಿಶೇಷ ಪೊಲೀಸ್ ತಂಡ ನಿಯೋಜನೆ ಮಾಡಲಾಗಿದ್ದು, 212 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. 24 ಗಂಟೆಯೂ ರೆಕಾರ್ಡ್ ವ್ಯವಸ್ಥೆ ಮಾಡಲಾಗಿದ್ದು ಸಿಸಿ ಕ್ಯಾಮರಾ ಬಳಸಿ ಅಪರಾಧ ಪತ್ತೆಗೆ ಪೊಲೀಸ್ ಇಲಾಖೆ ಮುಂದಾಗಿದೆ.  ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಬ್ಯಾಂಡ್, ಮಾಹಿತಿ ಪುಸ್ತಕ, ಸುರಕ್ಷತೆ, ಯಶಸ್ವಿ ದಸರಾ ಆಚರಣೆಗೆ ಪೋಲಿಸರ ಪಾತ್ರ ಕುರಿತ  ಕಿರು ಹೊತ್ತಿಗೆ ನೀಡಲಾಗುತ್ತದೆ.

ಜಂಬೂ ಸವಾರಿ ಮೆರವಣಿಗೆ ವೀಕ್ಷಣೆಗೆ ಪ್ರತ್ಯೇಕ ಆಸನ ವ್ಯವಸ್ಥೆ

ಇಂದು ನಾಡಹಬ್ಬ ದಸರಾ ಮಹೋತ್ಸವ ಜಂಬೂ ಸವಾರಿ ಮೆರವಣಿಗೆಗೆ ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಜಂಬೂಸವಾರಿ ತೆರಳುವ ಎಡ ಮತ್ತು ಬಲ ಭಾಗಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಗಣ್ಯರಿಗೆ, ಜನಪ್ರತಿನಿಧಿಗಳಿಗೆ ಕೂರಲು ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.

ಅರಮನೆಯ ಮುಂಭಾಗ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಅರಮನೆಯ ಮೂಲೆ ಮೂಲೆಯಲ್ಲೂ ಖಾಕಿ ಪಡೆ ಕಟ್ಟೆಚ್ಚರ ವಹಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: