ಪ್ರಮುಖ ಸುದ್ದಿಮೈಸೂರು

ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ : ಮೆರವಣಿಗೆ ಸುಸೂತ್ರವಾಗಿ ನೆರವೇರಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಮೈಸೂರು,s.8:-  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಮೆರವಣಿಗೆ ಸುಸೂತ್ರವಾಗಿ ನೆರವೇರಲು ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇಂದು ಅಪರಾಹ್ನ 2:15ರಿಂದ 2:58ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅರಮನೆಯ ಬಲರಾಮ ದ್ವಾರದ ಬಳಿಯಿರುವ ಕೋಟೆ ಆಂಜನೇಯಸ್ವಾಮಿ ದೇಗುಲ ಮುಂಭಾಗದಲ್ಲಿ ಸಿಎಂ ಬಿಎಸ್​ವೈ ನಂದಿ ಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸಾಯಂಕಾಲ 4:31ರಿಂದ 4:57ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಸಿ.ಎಂ  ಯಡಿಯೂರಪ್ಪ ಸೇರಿದಂತೆ ಇತರೆ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ. ನಂತರ ಮೈಸೂರಿನ ರಾಜಮಾರ್ಗದಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅರ್ಜುನ ಗಜ ಗಾಂಭೀರ್ಯದಿಂದ ಸಾಗಲಿದ್ದಾನೆ.

ರಾಜ್ಯದ 30 ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜತೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 8 ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟು 39 ಸ್ತಬ್ದ ಚಿತ್ರಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಜನಪದ ಕಲಾವಿದರು ಮೆರವಣಿಗೆಗೆ ಮತ್ತಷ್ಟು ರಂಗು ತುಂಬಲಿದ್ದಾರೆ. ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಪ್ರವಾಸಿಗರು ಕಾತುರರಾಗಿದ್ದಾರೆ. ಅರಮನೆ ನಗರಿಯಲ್ಲಿ ಸಂಭ್ರಮ ಮನೆಮಾಡಿದ್ದು, ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸರ ಕಣ್ಗಾವಲು ಏರ್ಪಡಿಸಲಾಗಿದೆ. ಉಗ್ರ ದಾಳಿ ಭೀತಿ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.

ಜಂಬೂ ಸವಾರಿ ಮೆರವಣಿಗೆ ಅಂತ್ಯಗೊಂಡ ನಂತರ ರಾತ್ರಿ 7 ಗಂಟೆಗೆ ಬನ್ನಿಮಂಟಪದ ಮೈದಾನದಲ್ಲಿ ದಸರಾ ಪಂಜಿನ ಕವಾಯಿತು ಅನಾವರಣಗೊಳ್ಳಲಿದೆ. ರಾಜ್ಯಪಾಲ ವಜುಭಾಯಿ ವಾಲಾ ಈ ವೇಳೆ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಬಿಎಸ್ವೈ ಸೇರಿದಂತೆ ಕೇಂದ್ರ ರಾಜ್ಯ ಸರ್ಕಾರದ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬನ್ನಿಮಂಟಪ ಮೈದಾನದ ಸುತ್ತಲೂ ಪೊಲೀಸ್ ಸರ್ಪಗಾವಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: