ಮೈಸೂರು

ವ್ಯಕ್ತಿಯೋರ್ವರ ಫೋಟೋ ಗೀಳಿಗೆ ವಾಲಿದ ಅಂಬಾರಿ : ಎಳೆದು ಹಿಡಿದುಕೊಂಡು ಆನೆಗೆ ತೊಂದರೆಯಾಗದಂತೆ ನೋಡಿಕೊಂಡ ಮಾವುತರು

ಮೈಸೂರು,ಅ.9:- ಪೊಲೀಸ್‌ ಬಿಗಿ ಭದ್ರತೆ ನಡುವೆ ಅರಮನೆ ಆವರಣದಲ್ಲಿ 8ಕ್ಕೂ ಹೆಚ್ಚು ಮಂದಿ ವಿಶೇಷ ಮಾವುತರು 45 ನಿಮಿಷದಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನು ಅರ್ಜುನ ಬೆನ್ನಮೇಲೆ ಕಟ್ಟಿದ್ದರು. ಆದರೆ ವ್ಯಕ್ತಿಯೋರ್ವರ ಫೋಟೋ ಗೀಳಿಗೆ ಅಂಬಾರಿ ವಾಲಿದ ಘಟನೆ ನಡೆದಿದೆ.

ಅಂಬಾರಿಯನ್ನು ಹೊತ್ತ ಅರ್ಜುನನ ಮುಂದೆ ಬಂದ ವ್ಯಕ್ತಿಯೊಬ್ಬ ಫೋಟೋ ತೆಗೆಯಲು ಮುಂದಾಗಿದ್ದು,  ಅರ್ಜುನ ತಬ್ಬಿಬ್ಬು ಗೊಂಡು ಅತ್ತಿತ್ತ ಜರುಗಾಡಿದ ಪರಿ ಣಾಮ ಅಂಬಾರಿ ಸ್ವಲ್ಪ ಬಲಕ್ಕೆ ವಾಲಿತ್ತು. ಬಲಶಾಲಿ ಅರ್ಜುನ ಅದ್ಯಾವುದನ್ನು ಲೆಕ್ಕಿಸದೆ ಅಂಬಾರಿ ಹೊತ್ತು ಮೂರೂವರೆ ಕಿ.ಮೀ.ಯಶಸ್ವಿಯಾಗಿ ಸಾಗಿ ಶಹಭಾಷ್‌ಗಿರಿ ಪಡೆದ.

ಚಾಮುಂಡೇಶ್ವರಿ ವಿಗ್ರಹವನ್ನು ಇರಿಸಿ ರುವ ಅಂಬಾರಿಯನ್ನು ವಸ್ತುಗಳನ್ನು ಸರಪಳಿಯಿಂದ ಮೇಲೆತ್ತುವ ಸಾಧನ ಯಂತ್ರ ಬಳಸಿ ಮೇಲಕ್ಕೆ ಎತ್ತಲಾಯಿತು. ನಂತರ ಅಂಬಾರಿಯನ್ನು ನಿಧಾನವಾಗಿ ಅರ್ಜುನನ ಬೆನ್ನ ಮೇಲೆ ಇಳಿಸಲಾಯಿತು. ಮಧ್ಯಾಹ್ನ 3ರ ವೇಳೆಗೆ ಅರ್ಜುನ ಆನೆ ಮೇಲೆ, ಹುಲ್ಲಿನಿಂದ ತಯಾರಿಸಿದ ಮೆತ್ತನೆಯ ನಮ್ದಾ ಇರಿಸಲಾಯಿತು. ಬಳಿಕ ಅದರ ಮೇಲೆ ಗಾದಿ ಹಾಗೂ ಅಲಂಕಾರದ ವಸ್ತ್ರ ತೊಡಿಸಿ, ಅದರ ಮೇಲೆ 750 ಕೆ.ಜಿ.ತೂಕದ ಅಂಬಾರಿ ಯನ್ನು ಇಟ್ಟು ದೊಡ್ಡ ಹಗ್ಗಗಳಿಂದ ಬಿಗಿಯಲು ಆರಂಭಿಸಿದ್ದರು.  ಅಂಬಾರಿ ಎಡಕ್ಕೆ ಇಲ್ಲವೇ ಬಲಕ್ಕೆ ವಾಲದಂತೆ ಎಚ್ಚರಿಕೆ ವಹಿಸಲಾಗಿತ್ತು. ಒಂದು ಕಡೆ ವಾಲಿದರೂ ಆನೆಗೆ ಒಂದೇ ಕಡೆ ಭಾರ ಬಿದ್ದು, ಮೂರೂವರೆ ಕಿ.ಮೀ. 750 ಕೆಜಿ ಅಂಬಾರಿ ಹೊತ್ತು ಸಾಗುವುದು ಕಷ್ಟವಾಗುತ್ತದೆ. ಈ ಬಗ್ಗೆ ಅರಿವಿರುವ ವಿಶೇಷ ಮಾವುತರು, ಬಹು ಎಚ್ಚರ ವಹಿಸಿ ಯಾವುದೇ ಕಡೆಗೆ ವಾಲದಂತೆ ಅಂಬಾರಿ ಕಟ್ಟುತ್ತಿದ್ದರು. 45 ನಿಮಿಷ ನಡೆದ ಈ ಕಾರ್ಯದಲ್ಲಿ ಕೊಂಚ ವ್ಯತ್ಯಾಸವಾದ್ದರಿಂದ ಅಂಬಾರಿಯು ಸ್ವಲ್ಪ ಬಲ ಭಾಗಕ್ಕೆ ವಾಲು ವಂತಾಯಿತು.     ಅಂಬಾರಿಯನ್ನು ಆನೆಯ ಬೆನ್ನಿಗೆ ಹಗ್ಗಗಳಿಂದ ಬಿಗಿಯುವಾಗ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಆನೆಯ ಮುಂದಕ್ಕೆ ಬಂದು ಫೋಟೊ ತೆಗೆಯಲು ಆರಂಭಿಸಿದ. ಈ ಸಂದರ್ಭದಲ್ಲಿ ಕ್ಯಾಮೆರಾ ಫ್ಲಾಶ್‌ ಲೈಟ್‌ನಿಂದ ತಬ್ಬಿಬ್ಬುಗೊಂಡ ಅರ್ಜುನ ಕೊಂಚ ಅತ್ತಿತ್ತ ಜರುಗಾಡಿದ್ದಾನೆ. ಆಗ ಮಾವುತರು ಹಗ್ಗ ಬಿಗಿಯುವಲ್ಲಿಕೊಂಚ ವ್ಯತ್ಯಾಸವಾಯಿತು. ಹಾಗಾಗಿ ಅಂಬಾರಿ ಬಲಕ್ಕೆ ವಾಲುವಂತಾಯಿತು. ಇದರಿಂದಾಗಿ ಸಂಪೂರ್ಣ ಜಂಬೂಸವಾರಿಯು ಎಲ್ಲಿ ಏನಾಗುವುದೋ ಎಂಬ ಆತಂಕದಲ್ಲಿಯೇ ಮುಂದುವರಿಯಿತು.

ಅಂಬಾರಿ ಬಲಕ್ಕೆ ವಾಲಿದ್ದರಿಂದ ವಿಶೇಷ ಮಾವುತರು ಅಂಬಾರಿಯ ಎಡ ಭಾಗಕ್ಕೆ ಎರಡು ಹಗ್ಗಗಳನ್ನು ಕಟ್ಟಿಕೊಂಡು ಜಂಬೂಸವಾರಿಯುದ್ದಕ್ಕೂ ಅಂಬಾರಿ ಬಲಕ್ಕೆ ವಾಲದಂತೆ ಎಳೆದು ಹಿಡಿದುಕೊಂಡು ಆನೆಗೆ ತೊಂದರೆಯಾಗದಂತೆ ನೋಡಿಕೊಂಡರು. ಈ ಕಾರ್ಯವನ್ನು ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದ ವರೆಗೂ ಮುಂದುವರಿಸಿದ ಮಾವುತರು, ಅರ್ಜುನ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದನ್ನು ಕಂಡು ನಿಟ್ಟುಸಿರು ಬಿಟ್ಟರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: