ಕ್ರೀಡೆ

ರೋಹಿತ್ ಟೆಸ್ಟ್‌ನಲ್ಲೂ ತಮ್ಮ ಕ್ರಿಕೆಟ್ ಆನಂದಿಸಲಿ: ವಿರಾಟ್ ಕೊಹ್ಲಿ

ಪುಣೆ,ಅ.9- ರೋಹಿತ್ ಶರ್ಮಾ ಅವರಂತಹ ಆಟಗಾರ ಅಗ್ರ ಕ್ರಮಾಂಕದಲ್ಲಿ ಇದೇ ರೀತಿಯ ಬ್ಯಾಟಿಂಗ್ ಮುಂದುವರಿಸಿದರೆ ಬಹುತೇಕ ಪಂದ್ಯಗಳಲ್ಲಿ ನಾವು ಗೆಲುವನ್ನು ಗುರಿಯಾಗಿಸಬಹುದು ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ, ಅಮೋಘ ಶತಕಗಳ ಸಾಧನೆ ಮಾಡಿದ್ದರು. ಈ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.

ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆ ನಮಗೆಲ್ಲರಿಗೂ ಅತೀವ ಸಂತಸವಾಗಿದ್ದು, ಅಗ್ರ ಕ್ರಮಾಂಕದಲ್ಲಿ ಇನ್ನಷ್ಟು ಮುಂದಕ್ಕೆ ಹೋಗುವ ಸಮಯ ಬಂದಿದೆ. ರೋಹಿತ್‌ಗೆ ಬ್ರೇಕ್ ನೀಡೋಣ. ಅವರು ಉತ್ತಮ ನಿರ್ವಹಣೆ ನೀಡಿದ್ದಾರೆ. ಅಗ್ರ ಕ್ರಮಾಂಕದಲ್ಲಿ ತಮ್ಮ ಬ್ಯಾಟಿಂಗ್‌ನ್ನು ಆನಂದಿಸಲಿ. ವೈಟ್ ಬಾಲ್ ಕ್ರಿಕೆಟ್‌ನಂತೆ ಟೆಸ್ಟ್‌ನಲ್ಲೂ ತಮ್ಮ ಕ್ರಿಕೆಟ್ ಆನಂದಿಸಲಿ. ಟೆಸ್ಟ್‌ಗಳಲ್ಲಿ ರೋಹಿತ್ ಏನು ಮಾಡುತ್ತಾರೆ ಎಂಬುದರ ಬಗ್ಗೆ ಗಮನ ಹರಿಸುವುದನ್ನು ನಿಲ್ಲಿಸೋಣ. ಅವರು ಉತ್ತಮ ಲಯದಲ್ಲಿದ್ದು, ಉತ್ತಮವಾಗಿ ಆಡುತ್ತಿದ್ದಾರೆ ಎಂದಿದ್ದಾರೆ.

ಟೆಸ್ಟ್‌ನಲ್ಲಿ ಮೊದಲ ಬಾರಿ ಆರಂಭಿಕನಾಗಿ ಆಡುತ್ತಿದ್ದರೂ ರಿಲ್ಯಾಕ್ಸ್ ಆಗಿ ಕಂಡುಬಂದಿರುವುದು ಅತ್ಯುತ್ತಮ ಅಂಶವಾಗಿದೆ. ವರ್ಷಗಳಿಂದ ಅವರು ಸಂಗ್ರಹಿಸಿದ ಅನುಭವಗಳು ನೆರವಿಗೆ ಬಂದವು. ತವರಿನಲ್ಲಿ ಅದ್ಭುತ ಲಯದಲ್ಲಿದ್ದಾರೆ. ನಮ್ಮ ಪಾಲಿಗಿದು ದೊಡ್ಡ ಬೋನಸ್ ಎಂದಿದ್ದಾರೆ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅವರು ಆಡಿದ ರೀತಿ ನೋಡಿದರೆ, ಆಟದ ಗತಿಯನ್ನು ಮುಂದಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದು ಬೌಲರ್‌ಗಳಿಗೆ ಎದುರಾಳಿ ತಂಡವನ್ನು ಆಲೌಟ್ ಮಾಡಲು ಎರಡು ತಾಸುಗಳಷ್ಟು ಹೆಚ್ಚುವರಿ ಸಮಯಯನ್ನು ಒದಗಿಸುತ್ತದೆ. ರೋಹಿತ್ ಈ ರೀತಿಯಾಗಿ ಆಡಿದರೆ ಬಹುತೇಕ ಪಂದ್ಯಗಳಲ್ಲಿ ಗೆಲುವಿಗಾಗಿ ಪ್ರಯತ್ನಿಸಬಹುದು. ನಿಜಕ್ಕೂ ರೋಹಿತ್ ಪ್ರದರ್ಶನದ ಬಗ್ಗೆ ಅತೀವ ಹರ್ಷವಿದೆ ಎಂದು ಹೇಳಿದ್ದಾರೆ.

ವಿಶಾಖಪಟ್ಟಣದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕಗಳನ್ನು ಬಾರಿಸಿರುವ ರೋಹಿತ್ ಅನುಕ್ರಮವಾಗಿ 176 ಹಾಗೂ 127 ರನ್‌ಗಳನ್ನು ಬಾರಿಸಿದ್ದರು. ಟೆಸ್ಟ್ ಆರಂಭಿಕನಾದ ಡೆಬ್ಯು ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕವನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾದರು. ಇದರೊಂದಿಗೆ ಟೆಸ್ಟ್ ಆರಂಭಿಕನಾಗಿ ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಭದ್ರವಾಗಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: