ಕ್ರೀಡೆ

ಓಟಗಾರ್ತಿ ನಿರ್ಮಲಾ ಶಿಯೊರನ್‌ಗೆ 4 ವರ್ಷ ನಿಷೇಧ

ಮೊನಾಕೊ,ಅ.9-ಭಾರತದ ಓಟಗಾರ್ತಿ ನಿರ್ಮಲಾ ಶಿಯೊರನ್‌ಗೆ ನಾಲ್ಕು ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ. ಅಲ್ಲದೆ, 2017ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಜಯಿಸಿದ್ದ ಎರಡು ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದೆ.

ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ನಿರ್ಮಲಾ ಶಿಯೊರನ್‌ಗೆ ನಿಷೇಧ ವಿಧಿಸಲಾಗಿದೆ. ನಿರ್ಮಲಾ ವಿರುದ್ಧ ನಿಷೇಧ ಅವಧಿಯು 2018ರ ಜೂ.29ರಂದು ಆರಂಭವಾಗಲಿದ್ದು, ಆಗಸ್ಟ್ 2016ರಿಂದ ನವೆಂಬರ್ 2018ರ ತನಕದ ಅವರ ಫಲಿತಾಂಶವನ್ನು ಅನೂರ್ಜಿತಗೊಳಿಸಲಾಗಿದೆ.

2018ರ ಜೂನ್‌ನಲ್ಲಿ ಭಾರತದಲ್ಲಿ ನಡೆದ ಸ್ಪರ್ಧೆಯ ವೇಳೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ನಿರ್ಮಲಾ ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿರುವುದು ಸಾಬೀತಾಗಿದೆ. ನಿರ್ಮಲಾ ಅವರ ಜೈವಿಕ ವ್ಯವಸ್ಥೆಯಲ್ಲೂ ಅನಿಯಮಿತ ರಕ್ತದ ಪರಿಚಲನೆ ಇರುವುದು ಪತ್ತೆಯಾಗಿದೆ. ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಅವರು ವಿಚಾರಣೆಗೆ ವಿನಂತಿಸಿಲ್ಲ. ಅವರು ಪರಿಣಾಮವನ್ನು ಎದುರಿಸಲು ಸಿದ್ಧರಿದ್ದರು ಎಂದು ಅಥ್ಲೆಟಿಕ್ಸ್ ಸಮಗ್ರತೆ ಘಟಕ ತಿಳಿಸಿದೆ.

ನಿರ್ಮಲಾ ಭಾರತದಲ್ಲಿ ನಡೆದಿದ್ದ 2017ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ಹಾಗೂ 4-400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಜಯಿಸಿದ್ದರು. 2016ರಲ್ಲಿ ರಿಯೋ ರಿ ಜನೈರೊ ಒಲಿಂಪಿಕ್ಸ್‌ನಲ್ಲೂ ಈ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಹೀಟ್ಸ್‌ನಲ್ಲಿ ಸೋತು ನಿರ್ಗಮಿಸಿದ್ದರು. (ಎಂ.ಎನ್)

Leave a Reply

comments

Related Articles

error: