ಕರ್ನಾಟಕಪ್ರಮುಖ ಸುದ್ದಿ

ಪರಮೇಶ್ವರ, ಜಾಲಪ್ಪಗೆ ಸೇರಿದ ನಿವಾಸ, ಸಂಸ್ಥೆಗಳ ಮೇಲೆ ಐಟಿ ದಾಳಿ

ಬೆಂಗಳೂರು,ಅ.10-ಕಾಂಗ್ರೆಸ್ ಮುಖಂಡರ ಒಡೆತನದ ನಿವಾಸ ಮತ್ತು ಸಂಸ್ಥೆಗಳ ಮೇಲೆ ಬೆಳ್ಳಂಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಡಾ.ಜಿ.ಪರಮೇಶ್ವರ, ಕಾಂಗ್ರೆಸ್ ಮುಖಂಡ ಆರ್.ಎಲ್.ಜಾಲಪ್ಪ ಪುತ್ರನ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಪರಮೇಶ್ವರ ಅವರ ನಿವಾಸ ಹಾಗೂ ತುಮಕೂರಿನ ಮರಳೂರಿನಲ್ಲಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹಾಗೂ ಡಿಗ್ರಿ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಆರು ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಒಟ್ಟು ಮೂರು ಕಾರುಗಳಲ್ಲಿ ಬಂದ ಐದು ಆಧಿಕಾರಿಗಳ ತಂಡ ಕಾಲೇಜಿನ ಸಿಬ್ಬಂದಿಯನ್ನು ಹೊರಗೆ ಕಳಿಸಿ ಕಾಲೇಜಿನ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನೂ ಕಾಂಗ್ರೆಸ್ ಮುಖಂಡ ಆರ್.ಎಲ್.ಜಾಲಪ್ಪ ಪುತ್ರನ ಮನೆ ಹಾಗೂ ಅವರ ಒಡೆತನದ ಆಸ್ಪತ್ರೆ ಮೇಲೂ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಬೆಂಗಳೂರಿನ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಐಟಿ ದಾಳಿಗೆ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ನಡೆಯಲಿ ಸಂತೋಷ. ಏನಾದರೂ ತಪ್ಪುಗಳಿದ್ದರೆ ತಿಳಿಸಲಿ. ದಾಳಿ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಕಾನೂನನ್ನು ಮೀರಿ ಅಥವಾ ಮುಚ್ಚಿಟ್ಟು ಏನಾದರೂ ವ್ಯವಹಾರ ನಡೆಸಿದ್ದಲ್ಲಿ ಅವರೇ ಬಹಿರಂಗಪಡಿಸುತ್ತಾರೆ ಎಂದು ತಿಳಿಸಿದ್ದಾರೆ.

ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿರುವ ಕುರಿತು ಮಾಹಿತಿ ಬಂದಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಕಾನೂನು ಬಾಹಿರವಾಗಿ ಏನಾದರೂ ನಡೆದಿದ್ದರೆ ಅಧಿಕಾರಿಗಳು ಕ್ರಮ ಜರುಗಿಸಲಿ ನಮ್ಮ ಅಭ್ಯಂತರವಿಲ್ಲ ಎಂದು ಪರಮೇಶ್ವರ ಹೇಳಿದ್ದಾರೆ.

ರಾಜಕೀಯ ದುರುದ್ದೇಶದಿಂದಲೇ ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿಗಳು ನಡೆಯುತ್ತಿವೆ. ಬಿಜೆಪಿ ನಾಯಕರ ಮೇಲೆ ಐಟಿ ದಾಳಿ ಏಕೆ ಮಾಡಿಲ್ಲ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. (ಎಂ.ಎನ್)

Leave a Reply

comments

Related Articles

error: