ಮೈಸೂರು

ಉಪಚುನಾವಣೆ ಪಕ್ಷಗಳ ಸೆಣಸಾಟವೋ,ಪ್ರತಿಷ್ಠೆಯ ಹೋರಾಟವೋ ಕಾದು ನೋಡಿ : ಡಾ.ಗುರಪ್ಪ ನಾಯ್ಡು

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಉನ್ನತ ಅಧಿಕಾರ ಸ್ಥಾನಗಳನ್ನು ಅನುಭವಿಸಿ ಕ್ಷುಲಕ ಕಾರಣಕ್ಕಾಗಿ ರಾಜೀನಾಮೆ ಸಲ್ಲಿಸಿ ಇಂದು ಪಕ್ಷದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ವಾಚಾಮಗೋಚವಾಗಿ ಗಧಾ ಪ್ರಹಾರ ನಡೆಸುತ್ತಿರುವುದು ಸರಿಯಲ್ಲವೆಂದು ಮೈಸೂರು ಜಿಲ್ಲಾ  ಕಾಂಗ್ರೆಸ್ ಉಸ್ತುವಾರಿ ಜಿಲ್ಲಾಧ್ಯಕ್ಷ ಡಾ.ಪಿ.ಗುರಪ್ಪನಾಯ್ಡು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಮಾತನಾಡಿ ಶ್ರೀನಿವಾಸ ಪ್ರಸಾದ್ ನನಗೆ ವಯಸ್ಸಾಗಿದೆ, ಆರೋಗ್ಯವೂ ಸರಿಯಲ್ಲ, ಮುಂದಿನ ದಿನಗಳಲ್ಲಿ ಯುವಕರಿಗೆ ಅವಕಾಶ ನೀಡುವೆ ಎಂದು ಅವರೇ ನಡೆಸಿದ ಸುದ್ದಿಗೋಷ್ಠಿ ದಾಖಲೆ ಪ್ರದರ್ಶಿಸಿದ್ದರು. ಆದರೆ ರಾಜೀನಾಮೆ ನಂತರ ಪ್ರಸಾದ್ ವಿನಾಕಾರಣ ಪಕ್ಷವನ್ನು ಹೀನಾಯವಾಗಿ ದೂಷಿಸುತ್ತಿರುವುದು ಹಿರಿಯ ರಾಜಕಾರಣಿಗೆ ಶೋಭೆಯಲ್ಲವೆಂದ ಅವರು, ಅವರೊಟ್ಟಿಗೆ 13 ಜನ ಸಚಿವರನ್ನು ಸಂಪುಟದಿಂದ ಪಲ್ಲಟಗೊಳಿಸಲಾಗಿತ್ತು, ಆದರೆ ಸ್ವಯಂ ಪ್ರತಿಷ್ಠೆಯಿಂದಾಗಿ ರಾಜೀನಾಮೆ ಸಲ್ಲಿಸಿ ವಿನಾಕಾರಣ ಸರ್ಕಾರದ ವಿರೋಧಿ ಹೇಳಿಕೆಗಳ ಮೂಲಕ ಪಕ್ಷಕ್ಕೆ ಮುಜುಗರನ್ನುಂಟು ಮಾಡಿದರು ಎಂದರು. ಮುಂದಿನ ದಿನಗಳಲ್ಲಿ ನಡೆಯಲಿರುವ ನಂಜನಗೂಡು ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರತಿಷ್ಠೆಯ ಹೋರಾಟವೋ ಅಥವಾ ಅಭ್ಯರ್ಥಿಗಳ ಬಲಾಬಲ ಸೆಣಸಾಟವೋ ಎಂದು ತಿಳಿಯಲಿದ್ದು ಈ ಭಾರಿ ಜನತೆ ತಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಶ್ರೀನಿವಾಸ ಪ್ರಸಾದ್ ಒಬ್ಬ ನಿಷ್ಕ್ರೀಯ ಮಂತ್ರಿ, ಪ್ರಮುಖ ಕಂದಾಯ ಇಲಾಖೆ ನಿರ್ವಹಿಸಲು ವಿಫಲರಾಗಿದ್ದರೆ ಅವರೊಬ್ಬ ನಿಷ್ಪ್ರಯೋಜಕರೆಂದು ಜರಿದಿದ್ದ ಬಿಜೆಪಿಯೇ ಇಂದು ಅವರಿಗೆ ಮಣೆ ಹಾಕಿರುವುದು ಹಾಸ್ಯಾಸ್ಪದವೆಂದರು.
ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನ್ನು ತಳಮಟ್ಟದಿಂದ ಪ್ರಬಲ, ಪರಿಣಾಮಕಾರಿಯಾಗಿ ಸಂಘಟಿಸಲಿದ್ದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಇತರೆ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಿ ಕೆಪಿಸಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಅಧ್ಯಕ್ಷರುಗಳ ಪಟ್ಟಿ :
ಕೃಷ್ಣರಾಜಸಾಗರ: (ಕೆ.ಆರ್.) ಎಂ.ಎಸ್.ಮಹದೇವ್, (ಸಾಲಿಗ್ರಾಮ) ಉದಯಶಂಕರ್. ಚಾಮುಂಡೇಶ್ವರಿ ಕ್ಷೇತ್ರ : ಉಮಾಶಂಕರ್, (ಇಲವಾಲ ) ಕೆ.ಎಸ್.ಸಿದ್ಧರಾಜು, ಹೆಚ್.ಡಿ.ಕೋಟಿ : ವಜಾಜ್ ಪಾಶ, (ಸರಗೂರು) ಮಾದಪ್ಪ, ಹುಣಸೂರು : (ನಗರ) ಹೆಚ್.ಎಸ್.ಶಿವಯ್ಯ, (ಗ್ರಾಮಾಂತರ) ಬಸವರಾಜೇಗೌಡ, (ಬಿಳಿಕೆರೆ) ಟಿ.ವಿ.ನಾರಾಯಣ ಹಾಗೂ ಜಿಲ್ಲೆಯ ಕಾರ್ಯಕಾರಿ ಸಮಿತಿಯ ನೂತನ ಘಟಕದ ಪದಾಧಿಕಾರಿಗಳನ್ನು ಕೆ.ಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ನಿಯೋಜಿಸಿ ಆದೇಶಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಮಲ್ಲಿಗಿ ವಿರೇಶ್, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಜಿಲ್ಲಾಧ್ಯಕ್ಷ ಬಸವರಾಜ್, ಪಕ್ಷದ ಅಡಗೂರು ಚನ್ನಬಸಪ್ಪ, ಧನಂಜಯಕುಮಾರ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: