ವಿದೇಶ

ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನಸ್ ವಿರುದ್ಧ ಬಂಧನ ವಾರೆಂಟ್

ಢಾಕಾ (ಬಾಂಗ್ಲಾದೇಶ),ಅ.10- ನೊಬೆಲ್ ಪ್ರಶಸ್ತಿ ಪುರಸ್ಕೃತ, ಬಾಂಗ್ಲಾದೇಶದ ಆರ್ಥಿಕ ತಜ್ಞ ಮಹಮ್ಮದ್ ಯೂನಸ್ ಗೆ ಬಂಧನ ವಾರೆಂಟ್ ಹೊರಡಿಸಲಾಗಿದೆ.

ಮಹಮ್ಮದ್ ಯೂನಸ್ ಅವರು ಮುನ್ನಡೆಸುವ ಕಂಪೆನಿಯಿಂದ ಸಿಬ್ಬಂದಿಯನ್ನು ತೆಗೆದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಬಂಧನ ವಾರೆಂಟ್ ಹೊರಡಿಸಲಾಗಿದೆ.

ಕಾರ್ಮಿಕ ಒಕ್ಕೂಟವನ್ನು ಸ್ಥಾಪಿಸಿದ ಕಾರಣಕ್ಕೆ ಗ್ರಾಮೀಣ್ ಕಮ್ಯೂನಿಕೇಷನ್ ನಿಂದ ಸಿಬ್ಬಂದಿಯನ್ನು ತೆಗೆಯಲಾಯಿತು ಎಂದು ದೂರಿದ್ದರು. ಹಿನ್ನೆಲೆಯಲ್ಲಿ ಢಾಕಾ ಕೋರ್ಟ್ ನ್ಯಾಯಾಧೀಶರು ಬುಧವಾರ ಆದೇಶ ನೀಡಿದ್ದರು. ಗ್ರಾಮೀಣ್ ಕಮ್ಯೂನಿಕೇಷನ್ ನಲ್ಲಿ ಅಧ್ಯಕ್ಷರಾಗಿರುವ ಯೂನಸ್ ವಿದೇಶದಲ್ಲಿ ಇದ್ದುದರಿಂದ ವಿಚಾರಣೆಗೆ ಹಾಜರಾಗಿರಲಿಲ್ಲ.

ಕಂಪೆನಿಯ ಸಿಇಒ ಹಾಗೂ ಸೀನಿಯರ್ ಮ್ಯಾನೇಜರ್ ಕೋರ್ಟ್ ಗೆ ಹಾಜರಾಗಿ, ಜಾಮೀನು ಪಡೆದಿದ್ದಾರೆ. ಕೋರ್ಟ್ ಗೆ ಹಾಜರಾಗಲು ಸಮನ್ಸ್ ಪಡೆಯುವ ಮುಂಚೆಯೇ ಯೂನಸ್ ಬಾಂಗ್ಲಾದೇಶವನ್ನು ತೊರೆದಿದ್ದರು ಎಂದು ತಿಳಿಸಲಾಗಿದೆ. ಯೂನಸ್ ವಿದೇಶದಿಂದ ಹಿಂತಿರುಗಿದ ತಕ್ಷಣ ಅಗತ್ಯ ಕಾನೂನು ಕ್ರಮ ಅನುಸರಿಸಲಾಗುವುದು ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ಯೂನಸ್ ಗ್ರಾಮೀಣ್ ಬ್ಯಾಂಕ್ ಸ್ಥಾಪನೆ ಮಾಡಿದವರು. ಗ್ರಾಮೀಣ ಭಾಗದ ಲಕ್ಷಾಂತರ ವ್ಯಾಪಾರಸ್ಥರಿಗಾಗಿಯೇ ಯಾವುದೇ ಶ್ಯೂರಿಟಿ ಇಲ್ಲದೆ ಸಾಲ ನೀಡುವ ಸಣ್ಣ ಪ್ರಮಾಣದ ಸಾಲ ನೀಡಲು ಬ್ಯಾಂಕ್ ಆರಂಭಿಸಿದವರು ಯೂನಸ್. ಕೆಲಸಕ್ಕಾಗಿಯೇ ನೊಬೆಲ್ ಪುರಸ್ಕೃತರಾದವರು.

ದೇಶದ ರಾಜಕೀಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಶೇಖ್ ಹಸೀನಾ ಜತೆಗೆ ಹನ್ನೆರಡು ವರ್ಷದಿಂದ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಎಂಟು ವರ್ಷದ ಹಿಂದೆ ಗ್ರಾಮೀಣ ಬ್ಯಾಂಕ್ ಮುಖ್ಯಸ್ಥ ಹುದ್ದೆಯಿಂದ ಯೂನಸ್ ಅವರನ್ನು ತೆಗೆದಾಗ ಕ್ರಮದ ಹಿಂದೆ ಹಸೀನಾ ಅವರ ಕೈವಾಡ ಇದೆ ಎನ್ನಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಯೂನಸ್ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅವರು ಸೋತಿದ್ದರು. ಈಗ ಬ್ಯಾಂಕ್ ಅನ್ನು ಹಸೀನಾ ನೇಮಿಸಿರುವ ಮ್ಯಾನೇಜರ್ ಗಳು ನಡೆಸುತ್ತಿದ್ದಾರೆ.

ಬಡವರಿಂದ ಇಪ್ಪತ್ತು ಪರ್ಸೆಂಟ್ ಗೂ ಹೆಚ್ಚು ಬಡ್ಡಿ ದರವನ್ನು ವಸೂಲಿ ಮಾಡಿದ್ದಾರೆ ಎಂದು ಶೇಖ್ ಹಸೀನಾ ಅವರು ಯೂನಸ್ ವಿರುದ್ಧ ಆರೋಪ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: