ಪ್ರಮುಖ ಸುದ್ದಿ

ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ : ಅ.21 ರಿಂದ ಮಡಿಕೇರಿಯಲ್ಲಿ ಆರಂಭ

ರಾಜ್ಯ( ಮಡಿಕೇರಿ) ಅ.10 :- ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಮೈಸೂರು ವಿಭಾಗೀಯ ಮಟ್ಟದ ಮತ್ತು ರಾಜ್ಯ ಮಟ್ಟದ ಪಂದ್ಯಾವಳಿ ನಗರದ ಸಾಯಿ ಟರ್ಫ್ ಹಾಕಿ ಮೈದಾನದಲ್ಲಿ ಅ.21 ರಿಂದ ಆರಂಭಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಯಿಕೇರಿ ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಆರ್.ರಾಜು ಕೊಡಗು ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೋಯಿಕೇರಿ ಇಬ್ಬನಿವಳವಾಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ, 2019-20ನೇ ಸಾಲಿನ ಮೈಸೂರು ವಿಭಾಗೀಯ ಮಟ್ಟದ ಪಂದ್ಯಾವಳಿ ಅ.21 ಮತ್ತು 22 ರಂದು ನಡೆಯಲಿದೆ ಎಂದರು.
ಆರಂಭಿಕ ದಿನ ಸಂಜೆ 4 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ಮೈಸೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ವಿಭಾಗೀಯ ಮಟ್ಟದ ಪಂದ್ಯಾವಳಿಯಲ್ಲಿ 32 ತಂಡಗಳು ಪಾಲ್ಗೊಳ್ಳಲಿವೆ. ತಂಡದ ವ್ಯವಸ್ಥಾಪಕರು, ತರಬೇತುದಾರರು ಸೇರಿದಂತೆ 500 ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ಪಂದ್ಯಾವಳಿ
ರಾಜ್ಯ ಮಟ್ಟದ ಪಂದ್ಯಾವಳಿ ಅ.24 ರಿಂದ 27 ರವರೆಗೆ ನಡೆಯಲಿದ್ದು, ಅ.24 ರಂದು ಬೆಳಗ್ಗೆ 10.30 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಇದರಲ್ಲಿ ಒಟ್ಟು 18 ತಂಡಗಳು, 350 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧಾ ವಿಜೇತರಿಗೆ ಪಾರಿತೋಷಕ ಮತ್ತು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆಂದು ತಿಳಿಸಿದರು.
ಪಂದ್ಯಾವಳಿಗೆ ಆಗಮಿಸುವ ಬಾಲಕರಿಗೆ ನಗರದ ಸಂತ ಮೈಕಲರ ಶಾಲೆಯಲ್ಲಿ ಹಾಗೂ ಬಾಲಕಿಯರಿಗೆ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಸತಿ ಕಲ್ಪಿಸಲಾಗಿದೆ. ಅಲ್ಲದೆ, ಗ್ರಾಮದ ಮುಖಂಡರ ಸಹಕಾರದೊಂದಿಗೆ ಕ್ರೀಡಾಪಟುಗಳಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ವಿಭಾಗೀಯ ಮತ್ತು ರಾಜ್ಯ ಮಟ್ಟದ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿದಂತೆ ಕೊಡಗಿನ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಹೆಚ್.ಆರ್.ರಾಜು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬೋಯಿಕೇರಿ ಸ.ಮಾ.ಪ್ರಾ ಶಾಲೆಯ ಹಳೇ ವಿದ್ಯಾರ್ಥಿಗಳಾದ ಎನ್.ಎ.ಅಪ್ಪಯ್ಯ, ಡಾ.ಎನ್.ಎಂ.ಪ್ರಕಾಶ್, ಎನ್.ಎ.ರವಿ ಬಸಪ್ಪ, ಎನ್.ಕೆ.ನಂದ ಹಾಗೂ ಮಧು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: