ಪ್ರಮುಖ ಸುದ್ದಿ

ನಿವೃತ್ತ ಪೊಲೀಸ್ ಅಧಿಕಾರಿಗಳ ಮಹಾಸಭೆ : ನಾಳೆ ‘ದಂತ ಚೋರ ವೀರಪ್ಪನ್’, ‘ಗೂಢಚೆರ್ಯೆ ದಿನಗಳು’ ಪುಸ್ತಕ ಬಿಡುಗಡೆ

ರಾಜ್ಯ( ಮಡಿಕೇರಿ) ಅ.10 : – ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಹಾಲಿ ಕಾಶ್ಮೀರದ ರಾಜ್ಯಪಾಲರ ಭದ್ರತಾ ಸಲಹೆಗಾರರಾಗಿರುವ ಕೆ.ವಿಜಯಕುಮಾರ್ ಅವರು ಬರೆದಿರುವ ‘ದಂತ ಚೋರ ವೀರಪ್ಪನ್’ ಮತ್ತು ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಅವರ ‘ಗೂಢಚರ್ಯೆ ದಿನಗಳು’ ಪುಸ್ತಕ ಬಿಡುಗಡೆ ಸಮಾರಂಭ ಅ.12ರಂದು ಮಡಿಕೇರಿಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಪ್ಪಯ್ಯ ಅವರು, ಅ.12ರ ಪೂರ್ವಾಹ್ನ 10ಗಂಟೆಗೆ ನಗರದ ಪೊಲೀಸ್ ಮೈತ್ರಿ ಭವನದಲ್ಲಿ ಮಹಾಸಭೆ ನಡೆಯಲಿದ್ದು, ಇದೇ ಸಂದರ್ಭ ಸಂಘದ ನೂತನ ಅಧ್ಯಕ್ಷ ಎ.ಕೆ.ಸುರೇಶ್ ಅವರ ಪದಗ್ರಹಣ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಮಹಾಸಭೆಯ ಬಳಿಕ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು, ನಿವೃತ್ತ ಡಿಜಿಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೆ.ವಿಜಯಕುಮಾರ್ ಅವರು ಬರೆದಿರುವ ದಂತ ಚೋರ ವೀರಪ್ಪನ್ ಕೃತಿ ಹಾಗೂ ತಾವೇ ಬರೆದಿರುವ ಗೂಢಚರ್ಯೆಯ ದಿನಗಳು ಕೃತಿಯನ್ನು ಅನಾವರಣಗೊಳಿಸಲಿದ್ದಾರೆ. ಅಲ್ಲದೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕೊಡಗಿನ ಪೊಲೀಸ್ ಅಧಿಕಾರಿಗಳ ಕರ್ತವ್ಯ ನಿಷ್ಠೆಯ ಬಗ್ಗೆ ಮಾತನಾಡಲಿದ್ದಾರೆ ಎಂದು ವಿವರಿಸಿದರು.
ವೀರಪ್ಪನ್ ಕಾರ್ಯಾಚರಣೆಯ ಸಂದರ್ಭ ತನ್ನ ಪ್ರಾಣವನ್ನು ಒತ್ತೆಯಿಟ್ಟು ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರ ಪ್ರಾಣವನ್ನು ಕಾಪಾಡಿದ ಕೊಡಗಿನ ಪೊಲೀಸ್ ಅಧಿಕಾರಿ ಮಣವಟ್ಟಿರ ಪೊನ್ನಪ್ಪ ಅವರ ಗೌರವಾರ್ಥ ಶಂಕರ್ ಬಿದರಿ ಅವರು ಒಂದು ಲಕ್ಷ ರೂ.ಗಳ ದತ್ತಿ ನಿಧಿಯನ್ನು ಹಾಗೂ ಉಡುಪಿಯಯ ಪಿ.ಕೆ. ಆಚಾರ್ಯ ಅವರು ತಮ್ಮ ತಾಯಿಯ ಸ್ಮರಣಾರ್ಥ ಒಂದು ಲಕ್ಷ ರೂ.ಗಳನ್ನು ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನೀಡಿದ್ದು, ಇದರ ಬಡ್ಡಿ ಹಣದಲ್ಲಿ ಕ್ರಮವಾಗಿ ಕೆಎಸ್‍ಆರ್‍ಪಿ ಹಾಗೂ ಸಿವಿಲ್ ಪೊಲೀಸರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ ಎಂದು ಅಪ್ಪಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಪಿ.ಪರಶಿವ, ಕಾರ್ಯದರ್ಶಿ ಅಚ್ಚುತನ್, ನಿರ್ದೇಶಕರಾದ ಬಿ.ಎಂ.ಭೀಮಯ್ಯ ಹಾಗೂ ಕಾವೇರಪ್ಪ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: